ಸಂಗೀತವನ್ನೇ ಉಸಿರಾಗಿಸಿಕೊಂಡವರು ಸಿದ್ದರಾಮ ಪೊಲೀಸ್ ಪಾಟೀಲ

 

ಕಲಬುರಗಿ,ನ.13-ಸಂಗೀತ ಆತ್ಮಕ್ಕೆ ಆಹಾರವಿದ್ದಹಾಗೆ ಸಂಗೀತವಿಲ್ಲದ ಜೀವನವೇ ಇಲ್ಲ, ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಂಗೀತ ಕಲಾವಿದ ಸಿದ್ದರಾಮ ಪೊಲೀಸ್ ಪಾಟೀಲ ಅವರು ಸಂಗೀತವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ಬದುಕಿದವರು ಎಂದು ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಉರ್ದು ಉಪನ್ಯಾಸಕಿ ಜಾಹೀದಾ ಬೇಗಂ, ಸಂಗೀತ ಶಿಕ್ಷಕಿ ಪಂಚಶೀಲಾ ಬೇನಾಳ, ನೂತನ ವಿದ್ಯಾಲಯ ಸಂಸ್ಥೆಯ ಸಂಗೀತ ಶಿಕ್ಷಕ ಮಹೇಶ ಬಡಿಗೇರ ಮತ್ತು ಎಂ.ಡಿ.ಆರ್.ವಸತಿ ಶಾಲೆ ಸಂಗೀತ ಶಿಕ್ಷಕರಾದ ಶಿವಶಂಕರ ಬಿರಾದಾರ, ಬಸವರಾಜ ಶಾಸ್ತ್ರಿ ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿಂದು ಹಮ್ಮಿಕೊಂಡಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಂಗೀತ ಕಲಾವಿದ ಮತ್ತು ಸಂಸ್ಥೆಯ ಸಂಗೀತ ಉಪನ್ಯಾಸಕ ಸಿದ್ದರಾಮ ಪೊಲೀಸ್ ಪಾಟೀಲ ಅವರ ಜೀವನ ಮತ್ತು ಸಾಧನೆ ಕುರಿತ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ಸಂಗೀತ ಕಲಾವಿದರಾದ ಸಿದ್ದರಾಮ ಪೊಲೀಸ್ ಪಾಟೀಲ ಅವರು ಹುಟ್ಟು ಅಂಧರಾಗಿದ್ದರೂ ‌ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ಸಂಗೀತ ಅಭ್ಯಾಸ ಮಾಡಿ ಆ ಮೂಲಕ ಸಂಗೀತ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವದ ಪೊಲೀಸ್ ಪಾಟೀಲ ಅವರು ಸಂಗೀತ ಕ್ಷೇತ್ರದಲ್ಲಿ ತಾವು ಬೆಳೆಯುವುದರ ಜೊತೆಗೆ ಅನೇಕ ಜನ ಶಿಷ್ಯರನ್ನು ಬೆಳೆಸುವುದರ ಮೂಲಕ ಸಂಗೀತ ಲೋಕಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಸಂಸ್ಥೆಯ ಪ್ರಾಚಾರ್ಯರಾದ ಬಸಂತಿಬಾಯಿ ಪಿ.ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ಲಕ್ಷ್ಮಣ ಪವಾರ, ವಿಜ್ಞಾನ ಉಪನ್ಯಾಸಕ ವೀರಣ್ಣ ಎಂ.ಸಜ್ಜನ್, ರಾಜ್ಯಪ್ರಶಸ್ತಿ ಪುರಸ್ಕೃತ ಆಕಾಶವಾಣಿ ಕಲಾವಿದ ಬಾಬುರಾವ ಕೋಬಾಳ, ಲಕ್ಷ್ಮೀಕಾಂತ ಸೌಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ವೇದಿಕೆ ಮೇಲಿದ್ದರು.

ಸಂಗೀತ ಶಿಕ್ಷಕ ವೀರೇಶ ಹೂಗಾರ ಕಾರ್ಯಕ್ರಮ ನಿರೂಪಿಸಿದರು. ಇಂಗ್ಲೀಷ್ ಉಪನ್ಯಾಸಕಿ ಹೇಮಾ ಎಸ್.ಚಿಂಚೋಳಿ ವಂದಿಸಿದರು.

ಹಿರಿಯ ಸಂಗೀತ ಕಲಾವಿದರಾದ ಬಸವರಾಜ ಸಾಲಿ, ದತ್ತರಾಜ ಕಲಶೆಟ್ಟಿ, ಅಮರಪ್ರಿಯ ಹಿರೇಮಠ ಸೇರಿದಂತೆ ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ನಂತರ ಬಾಬುರಾವ ಕೋಬಾಳ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

Leave a Comment