ಸಂಗೀತದಿಂದ ಆರೋಗ್ಯ ವೃದಿ

ಸಂಗೀತ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅದರಲ್ಲೂ ಇತ್ತೀಚಿನ ಯುವ ಪೀಳಿಗೆ ಸಂಗೀತವನ್ನು ಆಲಿಸದೇ ದಿನಕಳೆಯುವುದು ಕಷ್ಟ ಎಂದೇ ಹೇಳಬಹುದು. ಎಲ್ಲೇ ನೋಡಿದರೂ ಕಿವಿಗೆ ಇಯರ್ ಪೋನ್ ಹಾಕಿಕೊಂಡು ಸಂಗೀತ ಆಸ್ವಾದಿಸುವ ಯುವಜನರೇ ಕಾಣುತ್ತಾರೆ. ಅಷ್ಟರಮಟ್ಟಿಗೆ ಯುವ ಜನಾಂಗ ಸಂಗೀತದ ಮಾಧುರ್ಯಕ್ಕೆ ಮನ ಸೋತಿದೆ. ಸಂಗೀತ ಕೇಳಲೆಂದು ತರಹೇವಾರಿ ಹೆಡ್ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ವೈಜ್ಞಾನಿಕವಾಗಿ ಹೇಳುವುದಾದರೆ ಸಂಗೀತದಿಂದ ಕೇವಲ ಮನರಂಜನೆ ಮಾತ್ರವಲ್ಲ ಅದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಒಳ್ಳೆಯ ಸಂಗೀತ ಮನಸ್ಸನ್ನು ಪ್ರಶಾಂತಗೊಳಿಸಿ ಎಲ್ಲ ಒತ್ತಡಗಳಿಂದಲೂ ನಮ್ಮನ್ನು ಮುಕ್ತರನ್ನಾಗಿಸುತ್ತದೆ.
ಅನಾದಿ ಕಾಲದಿಂದಲೂ ಹಲವು ಪ್ರಕಾರಗಳ ಸಂಗೀತಗಳು ಲಭ್ಯವಿದೆ. ಶುಭ ಕಾರ್ಯದಿಂದ ಹಿಡಿದು ದುಃಖದ ಸನ್ನಿವೇಶದಲ್ಲೂ ಮನಸ್ಸನ್ನು ನಿರಾಳತೆಗೆ ಕೊಂಡೊಯ್ಯುವ ಶಕ್ತಿ ಸಂಗೀತಕ್ಕಿದೆ. ಕೆಲವು ಸಂಗೀತಗಳು ಭಾವನೆಗಳನ್ನು ಕೆರಳಿಸುತ್ತದೆ. ಇನ್ನೂ ಕೆಲವು ರೀತಿಯ ಸಂಗೀತ ಮನಸ್ಸಿನ ನೋವನ್ನು ಮರೆಸಲು ಸಹಾಯ ಮಾಡುತ್ತದೆ.
ಅಲ್ಲದೆ ಚಂಚಲ ಮನಸ್ಸಿಗೆ ಮುದ ನೀಡುವ ಶಕ್ತಿ ಸಂಗೀತಕ್ಕಿದೆ. ಹಿಂದಿನ ಕಾಲದಲ್ಲಿ ಸಂಗೀತದಿಂದ ಮಳೆ ತರಿಸಿದರು, ಸಂಗೀತದಿಂದ ಜೀವ ತುಂಬಿದರು ಎಂದೆಲ್ಲಾ ಕೇಳಿದ್ದೇವೆ. ಹಾಗಾಗಿಯೇ ನಮ್ಮ ಪೂರ್ವಜರು ಸಂಗೀತದ ಶಕ್ತಿ ಅರಿತು ಸಂಗೀತ ಕಚೇರಿಗಳನ್ನು ಆಯೋಜಿಸುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಸಂಗೀತ ಆರೋಗ್ಯ ಸುಧಾರಣೆಯಲ್ಲಿ ಬಳಕೆಯಾಗುತ್ತಿದೆ. ಚಿಕ್ಕ ವಯಸ್ಸಿನ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುವುದರಿಂದ ಮಗುವಿನ ಮಿದುಳು ಮತ್ತು ಮೌಖಿಕ ಕೌಶಲ್ಯಗಳು, ಸಂವಹನ ವೃದ್ಧಿಯಾಗುತ್ತದೆ ಎಂದು ಸಂಶೋಧನಾ ವರದಿಗಳು ಹೇಳಿವೆ.
ಚಿಕ್ಕವಯಸ್ಸಿನ ಅಂದರೆ ೮ ರಿಂದ ೧೧ ವರ್ಷ ವಯಸ್ಸಿನ ಮಕ್ಕಳಿಗೆ ಸಂಗೀತ ಅಧ್ಯಯನ ಮಾಡಿದರೆ ಅವರ ಐಕ್ಯೂ ಮತ್ತು ದೃಷ್ಟಿ ಗೋಚರ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು ಧೃಡಪಟ್ಟಿದೆ.
ಮರೆವಿನ ಕಾಯಿಲೆ ಅಥವಾ ನೆನಪಿನ ಶಕ್ತಿಯನ್ನು ಕಳೆದುಕೊಂಡ ಸನ್ನಿವೇಶದಲ್ಲಿ ಸಂಗೀತ ಆಲಿಕೆ ಶೀಘ್ರವಾಗಿ ಸ್ಮರಣೆ ಪಡೆಯಲು ಕಾರಣವಾಗುತ್ತದೆ.
ಸಂಗೀತ ರಕ್ತದೊತ್ತಡವನ್ನು ಹತೋಟಿಗೆ ತರುವ ಶಕ್ತಿಯನ್ನು ಹೊಂದಿರುವುದರಿಂದ ರಕ್ತದೊತ್ತಡ ಸಮಸ್ಯೆ, ಹೃದಯ ಸಂಬಂಧಿ ರೋಗ ಇರುವವರು ಉತ್ತಮ ಸಂಗೀತ ಕೇಳವು ಮೂಲಕ ರೋಗ ಮುಕ್ತರಾಗಬಹುದಾಗಿದೆ.
ಮಧುರವಾದ ಸಂಗೀತ ಸುಖ ನಿದ್ದೆ ತರುತ್ತವೆ. ವ್ಯಾಯಾಮದ ನಂತರ ಸಂಗೀತವನ್ನು ಆಲಿಸುವುದರಿಂದ ದೇಹ ವೇಗವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಹಾಗಾಗಿಯೇ ಜಿಮ್, ಯೋಗ ಕೇಂದ್ರಗಳಲ್ಲಿ ಸಂಗೀತ ಹಾಕುವುದನ್ನು ರೂಢಿ ಮಾಡಿಕೊಂಡಿದ್ದಾರೆ.
ಸಂಗೀತದಿಂದ ಸಾಕಷ್ಟು ಅನುಕೂಲವಿದೆ. ಹಾಗಾಗಿ ಈಗಿನಿಂದಲೇ ಒಳ್ಳೆಯ ಸಂಗೀತ ಆಲಿಸಿ ಆರೋಗ್ಯವಂತರಾಗಿ.

Leave a Comment