ಸಂಕ್ರಾಂತಿ : ಸಮ್ಮಿಶ್ರ ಸರ್ಕಾರ ಪತನ-ಹಗಲುಗನಸು

ದೇವದುರ್ಗ.ಜ.12- ರಾಜ್ಯದಲ್ಲಿ ಸಂಕ್ರಾಂತಿ ನಂತರ ಸಮ್ಮಿಶ್ರ ಸರ್ಕಾರ ಪತನವಾಗಲಿದೆಂದು ಬಿಜೆಪಿ ಮುಖಂಡರು ಹಗಲುಗನಸು ಕಾಣುತ್ತಿದ್ದಾರೆಂದು ಕೌಶಾಲ್ಯಾಭಿವೃದ್ಧಿ ಹಾಗೂ ಮುಜರಾಯಿ ಖಾತೆ ಸಚಿವ ಪಿ.ಟಿ.ಪರಮೇಶ್ವರ ನಾಯಕ ಹೇಳಿದರು.
ಅವರಿಂದು ಕಾಗಿನೆಲೆ ಸಂಸ್ಥಾನದ ಕನಕಗುರು ಪೀಠ ಸಾನಿಧ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವೂ 5 ವರ್ಷ ಅಧಿಕಾರ ಪೂರ್ಣಗೊಳಿಸಲಿದೆ. ಬಿಜೆಪಿ ಮುಖಂಡರು ಸಂಕ್ರಾಂತಿ ನಂತರ ಸರ್ಕಾರವೂ ಪತನಗೊಳ್ಳಲಿದೆಂದು ಅಪ ಪ್ರಚಾರ ಮಾಡುವಲ್ಲಿ ನಿರತರಾಗಿದ್ದಾರೆ. ಅವರ ಕನಸು ಫಲಿಸುವುದಿಲ್ಲವೆಂದರು.
ಉತ್ತರ ಕರ್ನಾಟಕದ ಭಾಗದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ 8 ಕೇಂದ್ರಗಳನ್ನು ಸ್ಥಾಪಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಂದರು. ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಕೋನದಿಂದ ಪ್ರಧಾನಿ ಮೋದಿ ಅವರು, ಸಾಮಾನ್ಯ ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ಕಲ್ಪಿಸಿರುವ ಹಿಂದೆ ರಾಜಕೀಯ ಗಿಮಿಕ್ ಅಡಗಿದೆ.
ಪ್ರಧಾನಿಯವರು ಕಳೆದ ನಾಲ್ಕುವರೆ ವರ್ಷಗಳ ಅಧಿಕಾರಾವಧಿಯಲ್ಲಿ ವಿದೇಶ ಸುತ್ತುವುದನ್ನು ತಮ್ಮ ಅಭಿವೃದ್ಧಿಯೆಂದು ಅರಿತುಕೊಂಡಿದ್ದಾರೆ. ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಅಧಿಕಾರಾವಧಿಯಲ್ಲಿ ಜಾರಿಗೊಳಿಸಿರುವ ಯೋಜನೆಗಳನ್ನು ಪ್ರಧಾನಿ ಮೋದಿ ಅವರು, ಈಗ ಅನುಷ್ಠಾನಗೊಳಿಸುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜಾದಳ ಮೈತ್ರಿ ಪಕ್ಷವೂ 18 ರಿಂದ 24 ಸ್ಥಾನಗಳನ್ನು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ರೈತರ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿತ್ತು. ಆದರೆ, ಈಗ ಮೋದಿಯವರು ರೈತರ ಸಾಲಮನ್ನಾ ವಿಷಯದಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಉಪಸ್ಥಿತರಿದ್ದರು.

Leave a Comment