ಸಂಕ್ರಾಂತಿಯ ಸುಗ್ಗಿ : ಮನೆಗಂಳದಲ್ಲಿ ರಂಗೋಲಿ – ಸಂಭ್ರಮ

ರಾಯಚೂರು.ಜ.14- ಸಂಕ್ರಾಂತಿಯ ಸಡಗರ ನಗರದಲ್ಲಿ ಇಂದಿನಿಂದಲೇ ಆರಂಭಗೊಂಡಿದೆ. ಸಂಕ್ರಾಂತಿಯ ಪೂರ್ವ ಭೋಗಿಯ ಚಳಿ ಕಾಸುವ ಮೂಲಕ ಅಲ್ಲಲ್ಲಿ ಜನ ಸಂಕ್ರಾಂತಿಯ ಸಿದ್ಧತೆಯಲ್ಲಿ ತೊಡಗಿದ್ದರು.
ವರ್ಷದ ಮೊದಲನೇ ಅತಿದೊಡ್ಡ ಹಬ್ಬ ಸಂಕ್ರಾಂತಿ. ಕೃಷಿಕರ ಸುಗ್ಗಿ ಹಬ್ಬವಾಗಿದೆ. ಸಂಕ್ರಾಂತಿಯಂದು ನದಿ ಸ್ನಾನ ಮಾಡುವ ಮೂಲಕ ವರ್ಷಪೂರ್ತಿ ಶುಭ ಹಾರೈಸಿ, ವಿಶೇಷ ಪೂಜೆ, ಪುನಸ್ಕಾರ ನಡೆಸಲಾಗುತ್ತದೆ. ಗ್ರಾಮೀಣ ಜನರ ಈ ಹಬ್ಬ ಗ್ರಾಮೀಣ ಭೋಜನಗಳಿಗೆ ವೇದಿಕೆಯೂ ಹೌದು. ಕಣ್ಮರೆಯಾದ ಎಳ್ಳಚ್ಚು ಸಜ್ಜೆ ರೊಟ್ಟಿ, ಭರ್ತಾ ಹಾಗೂ ಎಳ್ಳು-ಶೇಂಗಾ ಹೊಳಿಗೆ ಊಟದ ರುಚಿ ಸಂಕ್ರಾಂತಿಯ ವಿಶೇಷತೆಯಾಗಿದೆ. ಪತಂಗಗಳ ಹಾರಿಸುವ ಮೂಲಕ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ನಿರ್ವಹಿಸಲಾಗುತ್ತದೆ.
ನಾಳೆ ಸಹ ಕುಟುಂಬ ಪರಿವಾರದೊಂದಿಗೆ ನದಿ ಸ್ನಾನಕ್ಕೆ ತೆರಳಿ, ಸಂಕ್ರಾಂತಿಯನ್ನು ಸಂಭ್ರಮಿಸುತ್ತಾರೆ. ನಾಳಿನ ಸಂಕ್ರಾಂತಿಯ ಸಾಂಪ್ರದಾಯಿಕ ಪಿಕ್ನಿಕ್‌ಗೆ ನಗರದ ಬಹುತೇಕರ ಮನೆಯಲ್ಲಿ ಸಿದ್ಧತೆಗಳು ಆರಂಭಗೊಂಡಿವೆ. ದುಬಾರಿಯಾದ ಆಹಾರ ಪದಾರ್ಥಗಳ ಮಧ್ಯೆಯೂ ಸಂಕ್ರಾಂತಿಯ ಸಂಭ್ರಮಕ್ಕೆ ಜನ ಅಣಿಗೊಳ್ಳುತ್ತಿದ್ದಾರೆ. ಸಂಕ್ರಾಂತಿಯನ್ನು ಸುಗ್ಗಿಯ ಸಂಭ್ರಮವನ್ನಾಗಿ ಆಚರಿಸಲಾಗುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿ ವಿಶೇಷ ಮಾನ್ಯತೆ ಹೊಂದಿದೆ. ಗ್ರಾಮೀಣ ದೇವತೆಗಳ ಪೂಜೆ ಈ ಹಬ್ಬದ ಮತ್ತೊಂದು ವೈಶಿಷ್ಟ್ಯತೆ. ಮುಂಜಾನೆ ಮುನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಸಿರಿಧಾನ್ಯಗಳ ಚಿಕ್ಕ ರಾಶಿ ಇಟ್ಟು ಪೂಜೆ ಮಾಡಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ನಡೆಸಲಾಗುತ್ತದೆ.
ಭೋಗಿಯ ದಿನವಾದ ಇಂದು ಬೆಳಗಿನ ಜಾವದಲ್ಲಿ ಕಟ್ಟಿಗೆ ಮತ್ತಿತರ ತ್ಯಾಜ್ಯ ಬಳಿಸಿ, ಬೆಂಕಿ ಹಚ್ಚಿ, ಚಳಿ ಕಾಯಿಸುವ ಮೂಲಕ ಅನೇಕ ಕಡೆ ಭೋಗಿ ಆಚರಿಸಿದರು. ನಗರದ ಎಲ್‌ವಿಡಿ ಕಾಲೇಜು ಮುಂಭಾಗದಲ್ಲಿರುವ ಕೃಷ್ಣನ ಗುಡಿಯಲ್ಲಿ ಕಲ್ಯಾಣೋತ್ಸವ ನಡೆಸಲಾಯಿತು. ಗ್ರಾಮಾಂತರ ಪ್ರದೇಶದಲ್ಲಿ ಕೋಳಿ ಪಂದ್ಯಾವಳಿ ಸಂಕ್ರಾಂತಿಯ ಮತ್ತೊಂದು ಆಕರ್ಷಣೆಯಾಗಿದೆ.

Leave a Comment