ಸಂಕ್ರಾಂತಿಗೆ ರಾಜಕೀಯ ಕ್ರಾಂತಿ : ಬಿಜೆಪಿ ಆಪರೇಷನ್ ಬಹುತೇಕ ಯಶಸ್ವಿ, ದೋಸ್ತಿಗಳ ಮೌನ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಜ. ೧೦- ಸಂಕ್ರಾಂತಿ ಹಬ್ಬದ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಕ್ರಾಂತಿ ಉಂಟಾಗುವ ಸಾಧ್ಯತೆಗಳು ನಿಶ್ಚಳವಾಗಿವೆ.

ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸಂಬಂಧ ಅಳಸಿದ್ದು, ಇದರ ಲಾಭವನ್ನು ಪಡೆದುಕೊಳ್ಳಲು ಬಿಜೆಪಿ ತನ್ನದೇ ಆದ ರಾಜಕೀಯ ದಾಳ ಉರುಳಿಸಿದೆ.

ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕದಲ್ಲೂ ದೋಸ್ತಿ ಪಕ್ಷಗಳ ನಡುವೆ ಹಗ್ಗ-ಜಗ್ಗಾಟ ನಡೆದು ಕೊನೆಗೂ ಕಾಂಗ್ರೆಸ್ ನಾಯಕರು ಮೇಲುಗೈ ಸಾಧಿಸಿದ್ದರು. ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಅಸಹನೆಗೆ ಕಾರಣವಾಗಿದೆ. ಸದ್ಯಕ್ಕಂತೂ ದೋಸ್ತಿ ಪಕ್ಷಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರವಾಗಿದೆ. ಹಾಗಾಗಿ ದೋಸ್ತಿ ಪಕ್ಷಗಳ ನಡುವಿನ ಮುಸುಕಿನ ಗುದ್ದಾಟದ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೆಲ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಶಾಸಕರುಗಳಿಗೆ ಬಿಜೆಪಿ ಗಾಳ ಹಾಕಿರುವುದು ನಿಜ. ಸಚಿವ ರಮೇಶ್ ಜಾರಕಿಹೊಳಿ ಅವರ ಕೋಪತಾಪ ಇನ್ನೂ ಕಡಿಮೆಯಾಗಿಲ್ಲ. ಅವರ ಮೂಲಕವೇ ಬಿಜೆಪಿ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದೆ ಎಂದು ಹೇಳಲಾಗುತ್ತಿದೆ.

ಹಾಗಾಗಿ ಸಂಕ್ರಾಂತಿ ವೇಳೆಗೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆಗಳು ಹೆಚ್ಚಿವೆ.

ದೆಹಲಿಗೆ ಬಿಜೆಪಿ ಶಾಸಕರು

ಒಂದು ವೇಳೆ ಸರ್ಕಾರ ಬೀಳಿಸುವಷ್ಟು ಕಾಂಗ್ರೆಸ್ ಶಾಸಕರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಬಿಜೆಪಿ ಶಾಸಕರನ್ನು ತಮ್ಮತ್ತ ಸೆಳೆಯುವುದನ್ನು ತಪ್ಪಿಸಲು ಬಿಜೆಪಿ ಎಚ್ಚರವಹಿಸಿದೆ. ಹಾಗಾಗಿಯೇ  ನಾಳೆ ಮತ್ತು ನಾಡಿದ್ದು ನಡೆಯುವ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಎಲ್ಲ ಶಾಸಕರಿಗೂ ಬಿಜೆಪಿ ನಾಯಕರು ಸೂಚನೆ ನೀಡಿದ್ದಾರೆ.

ಜತೆಗೆ ಸಮ್ಮಿಶ್ರ ಸರ್ಕಾರ ಪಥನವಾದರೆ ಯಾರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಜತೆ ಕೈ ಜೋಡಿಸಬಾರದು ಎಂದು ವರಿಷ್ಠರಿಂದಲೇ ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಿಸಲು ಬಿಜೆಪಿ ಶಾಸಕರನ್ನು ದೆಹಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಲಾಗಿದೆ.

ನಾಳೆ ಮತ್ತು ನಾಡಿದ್ದು ರಾಷ್ಟ್ರೀಯ ಮಂಡಳಿ ಸಭೆ ಮುಗಿದ ನಂತರ ಭಾನುವಾರ (ಜ. 13) ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಎಲ್ಲ ಬಿಜೆಪಿ ಶಾಸಕರ ಜತೆ ಸಭೆ ನಡೆಸಿ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಿದ್ದಾರೆ ಎಂದು ಹೇಳಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆ ಸಂಬಂಧ ಪ್ರಧಾನಿ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್ ಶಾ ಶಾಸಕರ ಜತೆ ಸಭೆ ನಡೆಸಲಿದ್ದಾರೆ, ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದರೂ ಸಮ್ಮಿಶ್ರ ಸರ್ಕಾರವನ್ನು ಪಥನಗೊಳಿಸಿ ಅಧಿಕಾರ ಹಿಡಿಯುವ ಹವಣಿಕೆಯಲ್ಲಿರುವ ಬಿಜೆಪಿ ನಾಯಕರು, ಪಕ್ಷದ ಶಾಸಕರಿಗೆ ಪಾಠ ಹೇಳಲೆಂದೇ ಭಾನುವಾರದಂದು ಸಭೆ ಆಯೋಜಿಸಿದ್ದಾರೆ ಎನ್ನಲಾಗಿದೆ.

ಸಂಕ್ರಾಂತಿ ವೇಳೆಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾಗುವಷ್ಟು ವಿರೋಧಿ ಶಾಸಕರ ಬಲ ಬಿಜೆಪಿಗೆ ಲಭಿಸಿದರೆ ಬಿಜೆಪಿ ಶಾಸಕರ ಒಗ್ಗಟ್ಟನ್ನು ಕಾಪಾಡಲು ದೆಹಲಿಗೆ ಬರುವ ಬಿಜೆಪಿ ಶಾಸಕರನ್ನು ಒಟ್ಟಾಗಿಯೇ ಒಂದೆಡೆ ಇರುವ ಸಾಧ್ಯತೆಗಳು ಹೆಚ್ಚಿವೆ.

ಕಾಂಗ್ರೆಸ್ ಜತೆ ಸಂಬಂಧ ಹಳಸಿರುವುದರಿಂದ ಜೆಡಿಎಸ್ ನಾಯಕರು ಬಿಜೆಪಿ ಜತೆ ಹೋಗುವ ಬಗ್ಗೆ ಮಾನಸಿಕವಾಗಿ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೆಲ ಜೆಡಿಎಸ್ ನಾಯಕರು, ಬಿಜೆಪಿ ರಾಷ್ಟ್ರೀಯ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ರೇವಣ್ಣ ಇವರುಗಳೆಲ್ಲಾ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗಳನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು ಜೆಡಿಎಸ್ ಜತೆ ಸಖ್ಯಕ್ಕೆ ಸಿದ್ಧರಿಲ್ಲ. ಅವರ ಸಹವಾಸ ಬೇಡ ಎಂಬುದು ರಾಜ್ಯದ ಬಹುತೇಕ ಹಿರಿಯ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ.

ಆದರೆ, ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ಮಾಡೋಣ ಇಲ್ಲದಿದ್ದರೆ ಬೇಡ. ಜೆಡಿಎಸ್ ಗೊಡವೆಯೇ ಬೇಡ ಎಂಬುದು ರಾಜ್ಯ ಬಿಜೆಪಿ ನಾಯಕರ ನಿಲುವಾಗಿದೆ. ಹಾಗಾಗಿಯೇ ರಾಜ್ಯ ಬಿಜೆಪಿ ನಾಯಕರು ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ತೆರೆಮರೆಯಲ್ಲೇ ನಡೆಸಿದ್ದಾರೆ.

ಸರ್ಕಾರ ರಚಿಸುವಷ್ಟು ಶಾಸಕರನ್ನು ಕರೆತರುತ್ತೇವೆ ಎಂಬ ಅಭಯವನ್ನು ಈ ನಾಯಕರು ಬಿಜೆಪಿ ಹೈಕಮಾಂಡ್‌ಗೆ ನೀಡಿರುವುದು ಸುಳ್ಳೇನಲ್ಲ. ಹಾಗಾಗಿ ಸಂಕ್ರಾಂತಿ ವೇಳೆಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ ನಿರೀಕ್ಷಿಸಬಹುದು.

Leave a Comment