ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ನೆರವಿನ ಮಹಾಪೂರ

ಬೆಂಗಳೂರು, ಜೂ.೧೩- ಚಿಕ್ಕಮಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಚಾರ್ಮಡಿ ಘಾಟ್ ನಲ್ಲಿ ಗುಡ್ಡ ಕುಸಿದು, ವಾಹನ ಸಂಚಾರ ವ್ಯತ್ಯಯ ಉಂಟಾಗಿ ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ಸ್ಥಳೀಯರು ಮತ್ತು ಧರ್ಮಸ್ಥಳ ಪೊಲೀಸರು ನೆರವಿನ ಹಸ್ತ ಚಾಚಿದ್ದಾರೆ.

ಇನ್ನೊಂದೆಡೆ ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆರಾಯ ಕೊಂಚ ಬಿಡುವು ನೀಡಿದ್ದಾನೆ. ಆದರೆ ವಿರಾಜ ಪೇಟೆ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ತೋಡುಗಳು ಹಾಗೂ ಕದನೂರು ಉಪ ನದಿ ಉಕ್ಕಿ ಹರಿದು ಭತ್ತದ ಗದ್ದೆಗಳು ಜಲಾವೃತ್ತವಾಗಿವೆ.

ಚಾರ್ಮಡಿ ಘಾಟ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರಿಗೆ ಸ್ಥಳೀಯರು, ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು ಆಹಾರ ಪೂರೈಕೆ ಮಾಡಿದ್ದಾರೆ.

ಮತ್ತೊಂದೆಡೆ ಗುಡ್ಡ ಕುಸಿದು, ರಸ್ತೆಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಗುಡ್ಡ ಕುಸಿದ ಪರಿಣಾಮ ಚಿಕ್ಕಮಗಳೂರಿನಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಸಾಲುಗಟ್ಟಿ ನಿಂತಿದ್ದವು, ಇದರಿಂದಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು.

ಶಾಸಕ ಹರೀಶ್ ಪೂಂಜಾ, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ-ಸಂಘ ಪರಿವಾರದ ನೂರಾರು ಮಂದಿ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆಹಾರ ಪೊಟ್ಟಣ, ಬಿಸ್ಕತ್, ನೀರು, ಅಗತ್ಯ ಔಷಧಿಗಳನ್ನು ಕೊಟ್ಟಿಗೆಹಾರ ಮತ್ತು ಉಜಿರೆ ಕಡೆಯಿಂದ ಕೊಂಡೊಯಲಾಯಿತು.  ಕೆಲವೆಡೆ ಆಹಾರವನ್ನು ಸ್ಥಳದಲ್ಲೇ ತಯಾರಿಸಿ ಸಂತ್ರಸ್ತರಿಗೆ ವಿತರಿಸಲಾಯಿತು. ನಿನ್ನೆ ಸಂಜೆ ಘಾಟ್ ರಸ್ತೆ ತಡೆಯನ್ನು ತೆರವುಗೊಳಿಸಿದ್ದರೂ ಇಂದು ಮತ್ತು ನಾಳೆ ೨ ದಿನಗಳ ಕಾಲ ಮುಂಜಾಗ್ರತಾ ಕ್ರಮವಾಗಿ ರಸ್ತೆ ಸಂಚಾರವನ್ನು ತಡೆ ಹಿಡಿಯಲಾಗಿದೆ.

ಘಾಟ್‌ನ ವಿವಿಧೆಡೆ ಸೋಮವಾರ ಮಧ್ಯರಾತ್ರಿಯ ಸುಮಾರಿಗೆ ಗುಡ್ಡಕುಸಿತ ಉಂಟಾಗಿದ್ದು, ಅಲ್ಲಲ್ಲಿ ಭಾರೀ ಗಾತ್ರದ ಮರಗಳು ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸಾರಿಗೆ ಬಸ್‌ಗಳ ಸಮೇತ ಅಂದಾಜು ೨೫೦ಕ್ಕೂ ಹೆಚ್ಚು ವಾಹನಗಳು ಎರಡೂ ಕಡೆಗಳಲ್ಲಿ ಸಾಲುಗಟ್ಟಿ ನಿಂತಿತ್ತು. ಇದರಿಂದ ೨೦೦೦ಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಅವರು ಖುದ್ದು ಘಟನಾ ಸ್ಥಳಕ್ಕೆ ದೌಡಾಯಿಸಿ ರಸ್ತೆ ತಡೆ ತೆರವುಗೊಳಿಸುವ ಕಾರ್ಯಾಚರಣೆ  ಚುರುಕುಗೊಳಿಸಲು ಕ್ರಮ ಕೈಗೊಂಡಿದ್ದರು.  ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜಾ ಅವರು ಪ್ರಯಾಣಿಕರಲ್ಲಿ ಧೈರ್ಯ ತುಂಬಿದ್ದರಲ್ಲದೆ ಕಾರ್ಯಾಚರಣೆ ಮುಂದುವರಿಸಲು ಅಧಿಕಾರಿಗಳಿಗೆ ಆದೇಶಿಸಿದರು. ಜನಪ್ರತಿನಿಧಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸೇವಾಕಾರ್ಯದ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಭಾಗಮಂಡಲ ಭಾಗದಲ್ಲಿ ಇಂದು ಬೆಳಗ್ಗೆಯಿಂದ ಧಾರಕಾರ ಮಳೆಯಾಗುತ್ತಿದ್ದು, ಕೃಷಿಗೆ ಮಳೆ ಪೂರಕವಾದರೂ ಬಿರುಸಿನ ಮಳೆಯಿಂದ ಕೃಷಿಕರು ಕೆಲಸ ಸ್ಥಗಿತಗೊಳಿಸಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಮಳೆ ಕಾರಣ ವಿದ್ಯುತ್ ವ್ಯವಸ್ಥೆ ಇನ್ನೂ ಸುಧಾರಣೆಯಾಗಿಲ್ಲ. ಕೆಲವು ಗ್ರಾಮಗಳು ಕತ್ತಲಲ್ಲಿಯೇ ಇವೆ. ಗಾಳಿ ಮಳೆಗೆ ಅಲ್ಲಲ್ಲಿ ಮರ, ಕೊಂಬೆಗಳು ಮುರಿದು ವಿದ್ಯುತ್ ಕಂಬ ಬೀಳುತ್ತಿವೆ. ಸೆಸ್ಕ್ ಒಂದು ಕಡೆಯಿಂದ ದುರಸ್ತಿ ಮಾಡಿದರೂ ಮತ್ತೆ ಪ್ರಾಕೃತಿಕ ಆಡಚಣೆಯಿಂದ ವಿದ್ಯುತ್ ಸಂಪರ್ಕ ಸಾಧ್ಯವಾಗುತ್ತಿಲ್ಲ.

ಕೊಪ್ಪ ತಾಲೂಕಿನ ಸೂರ್ಯ ದೇವಾಸ್ಥಾನದ ಸಮೀಪ ಮಿನಿ ಸೇತುವೆಯೊಂದು ಕುಸಿದಿದ್ದು, ಮಂಗಳೂರು- ಚಿತ್ರದುರ್ಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಕಳೆದೊಂದು ತಿಂಗಳ ಹಿಂದಷ್ಟೇ ಈ ಮಿನಿ ಸೇತುವೆಯ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಆದರೆ ಒಂದೇ ಮುಂಗಾರು ಮಳೆಗೆ ಸೇತುವೆ ಕುಸಿದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಯಾವ ಪ್ರಮಾಣದಲ್ಲಿ ಈ ಸೇತುವೆಯ ಕಾಮಗಾರಿ ಕಳಪೆಯಾಗಿರಬಹುದು ಎಂಬ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರನ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ.

ಈ ಮಧ್ಯೆ ಕೆರಳದ ವೈ ನಾಡಿನಲ್ಲಿ ಮುಂಗಾರು ಮಳೆ ಬಿರುಸಾಗಿರುವುದರಿಂದ ಕಬಿನಿ ಜಲಾಶಯದಲ್ಲಿ 6 ದಿನಗಳ ಅವಧಿಯಲ್ಲಿ 15 ಅಡಿಗಳಷ್ಟು ನೀರು ಹೆಚ್ಚಾಗಿದೆ.

ಇದೇ ರೀತಿ ಮಳೆ ಮುಂದುವರೆದರೆ ಕೆಲ ದಿನಗಳಲ್ಲಿ ಕಬಿನಿ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ.

ಜಲಾಶಯಕ್ಕೆ 23,487 ಕ್ಯೂಸೆಕ್ಸಗಳಷ್ಟು ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 100 ಕ್ಯೂಸೆಕ್ಸಗಳಷ್ಟು ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಜಲಾಶಯದ ಸಹಾಯಕ ಅಭಿಯಂತರರು ತಿಳಿಸಿದ್ದಾರೆ.

Leave a Comment