ಶ‍್ರೀಲಂಕಾ ಈಸ್ಟರ್ ದಾಳಿ: ಕೊಯಮತ್ತೂರ್ ನ ಏಳು ಸ್ಥಳಗಳಲ್ಲಿ ಎನ್ಐಎ ದಾಳಿ

\ಚೆನ್ನೈ, ಜೂ 12 – ಶ್ರೀಲಂಕಾದಲ್ಲಿ ಈಸ್ಟರ್ ಭಾನವಾರದಂದು ಚರ್ಚ್ ಹಾಗೂ ಹೋಟೆಲ್ ಗಳ ಮೇಲೆ ನಡೆದ ಸರಣಿ ಆತ್ಮಾಹುತಿ ಬಾಂಬ್ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡ ಬುಧವಾರ ಜವಳಿ ನಗರ ಕೊಯಮತ್ತೂರಿನ ಏಳು ಕಡೆ ದಾಳಿ ನಡೆಸಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರ ಚಟುವಟಿಕೆಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೊಯಮತ್ತೂರಿನ ಏಳು ಕಡೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 250 ಅಮಾಯಕರು ಜೀವ ಕಳೆದುಕೊಂಡಿದ್ದರು.
ದಾಳಿಯಲ್ಲಿ ರಾಷ್ಟ್ರೀಯ ತನಿಖಾ ದಳದ ಪ್ರತ್ಯೇಕ ತಂಡಗಳು ಶಾಮಿಲಾಗಿದ್ದು, ಕೊಯಮತ್ತೂರಿನಲ್ಲಿ ಐಸಿಸ್ ಘಟಕಗಳಿವೆ ಎಂಬ ದೂರು ದಾಖಲಾದ ಹಿನ್ನೆಲೆಯಲ್ಲಿ ಅಂಬು ನಗರ, ಪೊದನೂರ್ ಹಾಗೂ ಕುನಿಯಾಮುಥೂರ್ ಪ್ರದೇಶಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಳಿ ವೇಳೆ ಕೊಯಮತ್ತೂರು ಪೊಲೀಸರ ನೆರವು ಪಡೆಯಲಾಗಿದ್ದು, ಶ್ರೀಲಂಕಾ ದಾಳಿಯ ರೂವಾರಿ ಝಹ್ರಾನ್ ಹಾಸಿಮ್ ನೊಂದಿಗೆ ಇಲ್ಲಿನ ಐಸಿಸ್ ಘಟಕಗಳ ಹಿರಿಯ ನಾಯಕರ ಸಂಬಂಧವಿದೆ ಎಂದು ವರದಿಗಳು ತಿಳಿಸಿದ್ದವು. ಹಾಸಿಮ್ ಫೇಸ್ ಬುಕ್ ಗೆಳೆಯ ಮೊಹ್ಮದ್ ಅಝರುದ್ದೀನ್ ಮನೆ ಮೇಲೂ ಕೂಡ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Leave a Comment