ಶ್ರೀಲಂಕಾ ನೌಕಾಪಡೆಯಿಂದ ೩ ಭಾರತೀಯ ಮೀನುಗಾರರ ಬಂಧನ

ಪುದುಕೊಟ್ಟಯಿ, ನ ೧೦ – ತನ್ನ ಜಲಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ ಆರೋಪದಲ್ಲಿ ಶ್ರೀಲಂಕಾ ನೌಕಾಪಡೆ ಮೂವರು ಭಾರತೀಯ ಮೀನುಗಾರರನ್ನು ಬಂಧಿಸಿ, ಧೋಣಿಯನ್ನು ವಶ ಪಡಿಸಿಕೊಂಡಿದೆ.

ನಿನ್ನೆ ಕೋವಿಲಾನ್ ಪಾಯಿಂಟ್‌ನ ವಾಯವ್ಯ ಸಮುದ್ರದಲ್ಲಿ ಎಂದಿನಂತೆ ಗಸ್ತು ತಿರುಗುತ್ತಿದ್ದಾಗ ಉತ್ತರ ನೌಕಾ ಕಮಾಂಡ್, ಭಾರತೀಯ ಮೂವರು ಮೀನುಗಾರರನ್ನು ಬಂಧಿಸಿದೆ ಎಂದು ಶ್ರೀಲಂಕಾ ನೌಕಾಪಡೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಬಂಧಿತ ಮೀನುಗಾರರನ್ನು ಶ್ರೀಲಂಕಾ ನೌಕಾ ಕೇಂದ್ರ ಉತ್ತತಾರಾಕ್ಕೆ ಮತ್ತು ವಶಪಡಿಸಿಕೊಂಡ ಮೀನುಗಾರಿಕೆ ಟ್ರಾಲರ್ ಅನ್ನು ನೌಕಾ ನೆಲೆಯ ಎಸ್‌ಎಲ್‌ಎನ್‌ಎಸ್ ಎಲಾರಾಗೆ ಕಳುಹಿಸಿದೆ. ವೈದ್ಯಕೀಯ ಪರೀಕ್ಷೆಯ ನಂತರ ಮೀನುಗಾರರನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಜಾಫ್ನಾದ ಮೀನುಗಾರಿಕೆ ಸಹಾಯಕ ನಿರ್ದೇಶಕರಿಗೆ ಹಸ್ತಾಂತರಿಸಲಾಗುವುದು ಎಂದು ನೌಕಾಪಡೆ ತಿಳಿಸಿದೆ.

ಈ ಮಧ್ಯೆ ಸೆರೆವಾಸಕ್ಕೊಳಗಾದ ಮೀನುಗಾರರು ಪುದುಕೊಟ್ಟಯಿ ಜಿಲ್ಲೆಯವರು ಎಂದು ತಮಿಳುನಾಡು ಮೀನುಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಈ ತಿಂಗಳು ಇಲ್ಲಿಯವರೆಗೆ ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರನ್ನು ಬಂಧಿಸಿದ ಎರಡನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಅವರು ನವೆಂಬರ್ ೨ ರಂದು ಪುದುಕೊಟ್ಟಯಿ ಮೂಲದ ಹತ್ತು ಮೀನುಗಾರರನ್ನು, ಎರಡು ಮೀನುಗಾರಿಕಾ ಟ್ರಾಲರ್‌ಗಳೊಂದಿಗೆ ವಶಪಡಿಸಿಕೊಂಡಿದ್ದರು.

Leave a Comment