ಶ್ರೀರಂಗಪಟ್ಟಣದಲ್ಲಿ ಅಕ್ರಮ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

3 ಸುತ್ತಿನ ಕೋಟೆ: ಮಣ್ಣಿನ ಗುಡ್ಡ ನೆಲಸಮ
ಶ್ರೀರಂಗಪಟ್ಟಣ, ಸೆ.5. ಜಿಲ್ಲೆಯ ಶ್ರೀರಂಗಪಟ್ಟಣದ ಮೂರು ಸುತ್ತಿನ ಕೋಟೆಯ ಸುತ್ತ ನಿಯಮ ಬಾಹಿರವಾಗಿ ಮಣ್ಣಿನ ಗುಡ್ಡವನ್ನು ನೆಲಸಮ ಮಾಡುತ್ತಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಖಾಸಗಿ ವ್ಯಕ್ತಿಯೊಬ್ಬರು ಮನೆ ನಿರ್ಮಾಣಕ್ಕಾಗಿ ಜೆಸಿಬಿ ಮೂಲಕ ದಿಬ್ಬ ನೆಲಸಮ ಮಾಡುತ್ತಿದ್ದಾರೆ. ಸುಮಾರು 450 ವರ್ಷಗಳ ಹಿಂದೆ ತಿಮ್ಮಣ್ಣ ನಾಯಕ ಎಂಬುವರಿಂದ ಕೋಟೆ ನಿರ್ಮಾಣ ಕೆಲಸ ಆರಂಭವಾಗಿತ್ತು. ನಂತರ ವಿಜಯನಗರ ಅರಸರು, ಯದುವಂಶದ ಅರಸರು, ಹೈದರಾಲಿ, ಟಿಪ್ಪು ಕಾಲದಲ್ಲಿ ಹಂತ ಹಂತವಾಗಿ ಕೋಟೆ ಅಭಿವೃದ್ಧಿಗೊಂಡಿತ್ತು. ಶತೃಗಳ ದಾಳಿ ತಪ್ಪಿಸಲು ಕೋಟೆ ಸುತ್ತ ಕಂದಕ ಹಾಗೂ ಅಗತ್ಯವಿರುವೆಡೆ ದಿಬ್ಬ ನಿರ್ಮಿಸಲಾಗಿತ್ತು. ಕೋಟೆಯನ್ನ ಐತಿಹಾಸಿಕ ಸ್ಮಾರಕ ಎಂದು ಘೋಷಿಸಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪುರಾತತ್ವ ಇಲಾಖೆ, ಸ್ಮಾರಕದ ಸುತ್ತ 100 ಮೀಟರ್ ವ್ಯಾಪ್ತಿ ಸಂರಕ್ಷಿತ ಪ್ರದೇಶವೆಂದು ಸೂಚಿಸಿತ್ತು.
ಕೋಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮಣ್ಣು ತೋಡುವುದು, ಕಟ್ಟಡ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತಿಲ್ಲ. 100 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳ ಆಸ್ತಿ ಇದ್ದರೂ ಯಥಾಸ್ಥಿಯಲ್ಲಿ ಅನುಭವಿಸಬೇಕೇ ಹೊರತು ಯಾವುದೇ ಅಭಿವೃದ್ಧಿ ಕೈಗೊಳ್ಳುವಂತಿಲ್ಲ. ಆದರೆ ಇಂತಹ ಕಟ್ಟುನಿಟ್ಟಿನ ಆದೇಶವಿದ್ದರೂ, ಇದೀಗ ಕೋಟೆಯ ಸಮೀಪದಲ್ಲೇ ಇರುವ ದಿಬ್ಬ ನೆಲಸಮವಾಗುತ್ತಿದ್ದು ಪುರಾತತ್ವ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Leave a Comment