ಶ್ರೀಗಳ ಬದುಕು ತೆರೆದ ಪುಸ್ತಕ ಇದ್ದಂತೆ: ಸಿದ್ದಲಿಂಗಶ್ರೀ

ತುಮಕೂರು, ಜ. ೨೦-  ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಬದಕು-ಜೀವನ ತೆರೆದ ಪುಸ್ತಕ ಇದ್ದಂತೆ. ಕಾಯಕ, ದಾಸೋಹ, ಸೇವೆ ಈ ಮೂರು ಅವರ ಬದುಕಿನ ಉಸಿರಾಗಿದ್ದವು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ನಗರದ ಸಿದ್ದಗಂಗಾ ಮಠದಲ್ಲಿ ನಡೆದ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರಥಮ ಪುಣ್ಯ ಸಂಸ್ಮರಣೋತ್ಸನ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಸುದೀರ್ಘ 89 ವರ್ಷಗಳ ಕಾಲ ಸನ್ಯಾಸತ್ವ ಬದುಕನ್ನು ಅತ್ಯಂತ ಶ್ರೇಷ್ಠವಾಗಿ ಕಾಯ, ವಾಚಾ, ಮನಸಾ ನಡೆಸಿಕೊಂಡು ಬಂದವರು ಶಿವಕುಮಾರ ಶ್ರೀಗಳು ಎಂದರು.

ಶ್ರೀಗಳಿಗೆ ವೈಯಕ್ತಿಕ ಬದುಕು ಎಂಬುದು ಇರಲಿಲ್ಲ. ಸದಾ ಸಮಾಜ ಮತ್ತು ಬಡ ಮಕ್ಕಳ ಶ್ರೇಯಸ್ಸಿಗಾಗಿ ಮಿಡಿಯುತ್ತಿದ್ದರು ಎಂದು ಅವರು ಹೇಳಿದರು.

ಶ್ರೀಗಳು ಎಲ್ಲರನ್ನು ತಿದ್ದುತ್ತಿದ್ದರು. ಅವರು ಮಾತಿನಿಂದ ತಿದ್ದುತ್ತಿರಲಿಲ್ಲ, ಅವರ ವರ್ತನೆಯಿಂದಲೇ ತಿದ್ದುತ್ತಿದ್ದರು ಎಂದು ಸ್ಮರಿಸಿದರು.

ಶ್ರೀಗಳು ಮಕ್ಕಳನ್ನು ದೇವರೆಂದೇ ಭಾವಿಸಿದ್ದರು. ಹಾಗಾಗಿ ಸದಾ ಮಕ್ಕಳ ಬದುಕು ಉಜ್ವಲವಾಗಲಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಮಿಡಿಯುತ್ತಿದ್ದರು ಎಂದರು.

ಗ್ರಾಮಾಂತರ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಬಡ ಮಕ್ಕಳ ಪಾಲಿನ ಆಶಾಕಿರಣವಾಗಿದ್ದಾರೆ ಎಂದರು.

ಸೂರ್ಯನ ಬೆಳಕಿನಂತೆ, ಬೀಸುವ ಗಾಳಿಯಂತೆ ಸದಾ ನಮ್ಮನ್ನು ಶ್ರೀಗಳು ಕಾಪಾಡುತ್ತಿದ್ದಾರೆ. ಅವರ ಸ್ಮರಣೆಯೇ ನನ್ನ ಬದುಕಿನ ಉಸಿರು ಎಂದು ಅವರು ಹೇಳಿದರು.

ಶ್ರೀಗಳು ಶಿವೈಕ್ಯರಾಗಿ 1 ವರ್ಷ ಕಳೆದಿದ್ದು, ಅನಾಥ ಪ್ರಜ್ಞೆ, ಶೂನ್ಯ ಭಾವ ಕಾಡುತ್ತಿದೆ. ಆದರೆ ಅವರ ಸ್ಮರಣೆಯೇ ನಮಗೆಲ್ಲ ದೊಡ್ಡಶಕ್ತಿಯಾಗಿದೆ ಎಂದರು.

ಶ್ರೀಗಳು ಪ್ರತಿನಿತ್ಯ ಇಷ್ಟಲಿಂಗ ಪೂಜೆಯನ್ನು ತಪ್ಪದೇ ಮಾಡುತ್ತಿದ್ದರು. ಶ್ರೀಮಠದ ಪ್ರತಿಯೊಂದು ಕಟ್ಟಡ ಮತ್ತು ಕಲ್ಲಿನಲ್ಲಿ ಶ್ರೀಗಳ ಸ್ಪರ್ಶವಿದೆ. ಖಾವಿಧಾರಿಗಳಿಗೆ ಕಿಮ್ಮತ್ತು ತಂದವರು ಶಿವಕುಮಾರ ಸ್ವಾಮೀಜಿಯವರು ಎಂದು ಹೇಳಿದರು.

Leave a Comment