ಶ್ರೀಗಳು ಕ್ಷೇಮವಾಗಿದ್ದಾರೆ: ಬಿಎಸ್‌ವೈ

ತುಮಕೂರು, ಡಿ. ೭- ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಆರೋಗ್ಯವಾಗಿ ಲವಲವಿಕೆಯಿಂದ ಇದ್ದಾರೆ. ಇನ್ನು ಹತ್ತಾರು ವರ್ಷಗಳ ಕಾಲ ನಮಗೆ ಅವರ ದರ್ಶನಾಶೀರ್ವಾದ ಭಾಗ್ಯ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು.

ನಗರದ ಸಿದ್ದಗಂಗಾ ಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ಕ್ಷೇಮವಾಗಿದ್ದಾರೆ. ಈಗತಾನೆ ಉಪಹಾರ ಸ್ವೀಕಾರ ಮಾಡಿ‌ ಶ್ರೀಗಳು ಮಾತನಾಡಿ ನಮಗೆಲ್ಲರಿಗೂ ದರ್ಶನ ನೀಡಿದ್ದಾರೆ ಎಂದರು.

ಬಸವಣ್ಣನವರ ವಚನ ಹೇಳಿ ಅವರ ವಯಸ್ಸು ಎಷ್ಟು ಎಂದು ಹೇಳಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ ಶ್ರೀಗಳು ಬಹಳ ನಿರೀಕ್ಷೆ ಮೀರಿ ಲವಲವಿಕೆಯಿಂದ ಇದ್ದಾರೆ ಎಂದರು.

ರಾಜ್ಯದ ಆರೂವರೆ ಕೋಟಿ‌ ಜನರು ಭಯ, ಆತಂಕಪಡುವ ಅಗತ್ಯವಿಲ್ಲ. ಶ್ರೀಗಳು ಆರಾಮವಾಗಿದ್ದಾರೆ. ಚನ್ನೈನಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಬರುತ್ತಾರೆ. ಶ್ರೀಗಳಿಗೆ ಭಗವಂತ ಹೆಚ್ಚಿನ ಆಯಸ್ಸು ನೀಡಲಿ ಎಂದು ಪ್ರಾರ್ಥಿಸಿದರು.

ಇನ್ನು ಹತ್ತಾರು ವರ್ಷಗಳ ಕಾಲ ಶ್ರೀಗಳ ದರ್ಶನ ಆಶೀರ್ವಾದದ ಭಾಗ್ಯ ನಮಗೆ ಅಗತ್ಯವಿದೆ. ನಡೆದಾಡುವ ಈ ಮಹಾಪುರಷನ ದರ್ಶನಾಶೀರ್ವಾದ ಭಾಗ್ಯ ಪಡೆದಿರುವುದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯ ಎಂದರು.

ಶ್ರೀಗಳ ಮಾರ್ಗದರ್ಶನ, ಸಮಾಜಮುಖಿ ಕಾರ್ಯಗಳು ಸಮಾಜಕ್ಕೆ ಇನ್ನು ಹೆಚ್ಚು ಹೆಚ್ಚು ಅವಶ್ಯಕತೆ ಇದೆ. ಶ್ರೀಗಳು ಶೀಘ್ರ ಗುಣಮುಖರಾಗಲಿದ್ದಾರೆ ಎಂದರು.

ಆಶ್ಚರ್ಯ ಅಂದರೆ ಬಸವಣ್ಣನವರ ವಚನ ಹೇಳುವುದು, ವಯಸ್ಸು ಹೇಳುವುದು, ಆರೋಗ್ಯ ವಿಚಾರಿಸುವುದು, ಇಂತಹ ನಡೆದಾಡುವ ದೇವರ ದರ್ಶನ ಮಾಡುವುದು ನಮ್ಮ ಸುದೈವ ಯಾವುದೋ ಜನ್ಮದ ಪುಣ್ಯಫಲ ಎಂದರು.

ಶಸ್ತ್ರಚಿಕಿತ್ಸೆಗಾಗಿ ಶ್ರೀಗಳನ್ನು ಚನ್ನೈಗೆ ಕರೆದೊಯ್ಯಲಾಗುತ್ತಿದೆ. ಏರ್‌ ಆಂಬ್ಯುಲೆನ್ಸ್ ಮುಖಾಂತರ ಶ್ರೀಗಳು ಚನ್ನೈಗೆ ತೆರಳಲಿದ್ದಾರೆ ಎಂದರು.

ಸೋಮಣ್ಣ ಭೇಟಿ
ಶ್ರೀಮಠದ ಭಕ್ತರಾದ ಮಾಜಿ ಸಚಿವ ವಿ. ಸೋಮಣ್ಣ ಅವರು ಸಹ ಇಂದು ಬೆಳಿಗ್ಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದರು.

ಶ್ರೀಗಳ ಆರೋಗ್ಯ ಸುಧಾರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚನ್ನೈಗೆ ಕರೆದೊಯ್ಯಲಾಗುತ್ತಿದೆ. ಭಕ್ತಱ್ಯಾರು ಆತಂಕ ಪಡುವ ಅಗತ್ಯವಿಲ್ಲ. ಶ್ರೀಗಳು ಸಂಪೂರ್ಣ ಗುಣಮುಖರಾಗಲೆಂದು ಈ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.

Leave a Comment