ಶ್ರಾವಣ ಮಾಸದಲ್ಲಿ ಪ್ರತಿದಿನ ಭಕ್ತರ ಮನೆಯಲ್ಲಿ ಇಷ್ಟಲಿಂಗ ಪೂಜೆ: ತೆಗ್ಗಿನಮಠ ಶ್ರೀ

ಹರಪನಹಳ್ಳಿ.ಆ.25; ಶ್ರಾವಣ ಮಾಸದಲ್ಲಿ ಸರ್ವ ಸಂಪತ್ಪ್ರದವಾದ ಸನ್ಮಂಗಳ ಸಂತಾನಕರವಾದ ವರಲಕ್ಷ್ಮೀವ್ರತ ಪೂಜೆ ಮಾಡಬೇಕು. ಹಾಗೆ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟಗಳು ನಾಶವಾಗುವುವು ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿರುವ ಶ್ರೀಮಠದ ಭಕ್ತ ಸಿ.ಎಂ.ಕೋಟ್ರಯ್ಯ ಅವರ ನಿವಾಸದಲ್ಲಿ ಶುಕ್ರವಾರ ಶ್ರಾವಣ ಮಾಸದ ಹಾಗೂ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಪೂಜೆ ನೆರವೇರಿಸಿ ನಂತರ ಭಕ್ತರಿಗೆ ಅಶೀವರ್ಚನ ನೀಡಿದರು. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಾಗಲಿ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು. ಇದರಿಂದ ದಾರಿದ್ರ್ಯವು ನಾಶವಾಗಿ ಅಷ್ಟೈಶ್ವರ್ಯವು ಪ್ರಾಪ್ತಿಯಾಗುತ್ತದೆ. ಆದ ಕಾರಣ ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಾಗಿ ಲಕ್ಷ್ಮಿ ಪೂಜೆಯನ್ನು ಮಾಡಿದರೆ ಸಕಲ ಭೋಗಭಾಗ್ಯಗಳು ಪ್ರಾಪ್ತಿಯಾಗುತ್ತವೆ ಎಂದರು. ಶ್ರಾವಣ ಮಾಸದಲ್ಲಿ ಪುರಾಣ, ಪುಣ್ಯ ಕಥೆಗಳ ಶ್ರವಣ, ಪಠಣ ಮಾಡುತ್ತಾ, ಹಬ್ಬಗಳನ್ನು ಆಚರಿಸುತ್ತಾ ಭಗವಂತನ ಅರ್ಚನೆ ಅರಾಧನೆಯಲ್ಲಿಯೇ ಕಾಲ ಕಳೆಯುತ್ತೇವೆ. ಶ್ರಾವಣ ಮಾಸ ಆತ್ಮ-ಪರಮಾತ್ಮಾನುಸಂಧಾನದ ಪರಮ ಪವಿತ್ರ ಮಾಸವಾಗಿದ್ದು, ಇಂತಹ ಅಮೂಲ್ಯ ಸಂದರ್ಭದಲ್ಲಿ ದೇವತೆಗಳ ವಿಶೇಷ ಪೂಜೆ, ಹೋಮ ಹವನ, ಧರ್ಮ ಚಿಂತನೆ ಹಾಗೂ ಭಗವತ್ ಚಿಂತನೆಗಳು ಕಾರ್ಯಸಿದ್ಧಿಯ ಸಂಕಲ್ಪಗಳ ವ್ರತಾಚರಣೆಯ ಕಾರ್ಯಾನುಷ್ಠಾನಗಳ ಮುಖೇನ ಬದುಕಿನಲ್ಲಿ ಸೌಹಾರ್ದ, ಸಹಬಾಳ್ವೆ ಹಾಗೂ ಸಾತ್ವಿಕ ಸಂಪನ್ನತೆ ತಂದು ಕೊಡುತ್ತದೆ ಎಂದು ಹೇಳಿದರು. ತೆಗ್ಗಿನಮಠದ ಲಿಂ.ಚಂದ್ರಶೇಖರ ಶಿವಾಚಾರ್ಯರ ಕರ್ತೃತ್ವ ಶಕ್ತಿಯನ್ನು ಬಲವಾಗಿ ನಂಬಿ ಶ್ರೀಮಠವನ್ನು ಶೈಕ್ಷಣಿಕವಾಗಿ ಬಲಗೊಳಿಸಿದ ಲಿಂ.ಚಂದ್ರಮೌಳೀಶ್ವರ ಶಿವಾಚಾರ್ಯರ ಗುರುಕರ ಸಂಜಾತರನ್ನು ಸದ್ಭಕ್ತರ ಜೊತೆಗೆ ಗುರು ಶಿಷ್ಯರ ಬಾಂಧುತ್ವವನ್ನು ಗಟ್ಟಿಗೊಳಿಸುವ ಕಾಯಕ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ 3ನೇ ವರ್ಷದ ಶ್ರಾವಣ ಮಾಸದ ಪ್ರತಿದಿನ ಒಬ್ಬ ಶ್ರೀಮಠದ ಭಕ್ತರ ಮನೆಯಲ್ಲಿ ಶ್ರೆಯೋಭಿವೃದ್ದಿಗಾಗಿ ಶ್ರೀಗಳ ಇಷ್ಟಲಿಂಗ ಪೂಜೆ, ಶ್ರೀರುದ್ರ ಪಠಣ, ಶಿವಪಂಚಾಕ್ಷರಿ ಜಪ, ಪಾದೋದಕ ಕ್ರಿಯಾ ಪ್ರಸಾದ ನಡೆದು ಸದ್ಭಕ್ತರಲ್ಲಿ ಧರ್ಮಾಚರಣೆಯ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

 

Leave a Comment