ಶ್ರಮಿಕ್ ರೈಲಿನಲ್ಲಿ ಬಿಹಾರದತ್ತ ಪ್ರಯಾಣ ಬೆಳೆಸಿದ 1049 ಕಾರ್ಮಿಕರು

 

ಕಲಬುರಗಿ,ಮೇ.22-ಲಾಕ್ ಡೌನ್ ನಿಂದ ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದ 1049 ಬಿಹಾರ ಮೂಲದ‌ ಕಾರ್ಮಿಕರು ಗುರುವಾರ ರಾತ್ರಿ 8.30 ಗಂಟೆಗೆ ಶ್ರಮಿಕ್ ಎಕ್ಸ್ ಪ್ರೆಸ್ ರೈಲು ಮೂಲಕ ತವರು ರಾಜ್ಯ ಬಿಹಾರನತ್ತ ಪ್ರಯಾಣ ಬೆಳೆಸಿದರು.

ಜಿಲ್ಲಾಧಿಕಾರಿ ಶರತ್‌ ಬಿ.‌ ಅವರು ರೈಲು ನಿಲ್ದಾಣದಲ್ಲಿ ಖುದ್ದು ಹಾಜರಿದ್ದು, ವಲಸಿಗ ಕಾರ್ಮಿಕರ ಪ್ರಯಾಣಕ್ಕೆ ಎಲ್ಲಾ ಪೂರ್ವಸಿದ್ಧತೆ ಕೈಗೊಂಡು ರೈಲು ನಿಲ್ದಾಣದಿಂದ ಬಿಡುತ್ತಿದಂತೆ ತವರು ರಾಜ್ಯದತ್ತ ಹೊರಟ ಬಿಹಾರಿಗಳಿಗೆ ಕೈಬೀಸಿ ಪ್ರಯಾಣಕ್ಕೆ ಶುಭ ಕೋರಿದರು.

ಡಿ.ಸಿ. ಶರತ್ ಬಿ. ಮಾತನಾಡಿ ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸುಮಾರು 1049 ಬಿಹಾರದ ನಿವಾಸಿಗಳು ಪ್ರಯಾಣಕ್ಕೆ ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲರು ತಮ್ಮ ರಾಜ್ಯಕ್ಕೆ ಪ್ರಯಾಣ ಬೆಳೆಸಿದರು ಎಂದರು.

ಬಿಹಾರಕ್ಕೆ‌ ಪ್ರಯಾಣ ಬೆಳೆಸಲು ಬೇರೆ ಜಿಲ್ಲೆಯಿಂದ ಬಂದವರನ್ನು ಆಯಾ ಜಿಲ್ಲೆಯಿಂದಲೇ ಸ್ಕ್ರೀನಿಂಗ್ ಮಾಡಿ ತರಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿದ್ದ ಕಾರ್ಮಿಕರಿಗೆ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿದೆ ಎಂದು ಡಿ.ಸಿ. ಶರತ್‌ ಬಿ. ತಿಳಿಸಿದರು.

ಮಂಗಳವಾರ ಕಲಬುರಗಿ ರೈಲು ನಿಲ್ದಾಣದಿಂದ ಮೊದಲನೇ ಶ್ರಮಿಕ್ ಎಕ್ಸ್‌ಪ್ರೆಸ್ ರೈಲು ಸುಮಾರು 1500 ಜನ ಕಾರ್ಮಿಕರನ್ನು ಕಲಬುರಗಿ ರೈಲ್ವೆ ನಿಲ್ದಾಣದಿಂದ ಉತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗಿತ್ತು. ಬುಧವಾರ ಎರಡನೇ ಶ್ರಮಿಕ್ ಎಕ್ಸ್ ಪ್ರೆಸ್ ರೈಲು 1436 ಕಾರ್ಮಿಕರನ್ನು ಕಲಬುರಗಿಯಿಂದ ಬಿಹಾರಕ್ಕೆ ಕರೆದುಕೊಂಡು ಹೋಗಿದ್ದು, ಇಂದಿನ ವಿಶೇಷ ರೈಲು ಮೂರನೇ ಶ್ರಮಿಕ್ ಎಕ್ಸ್‌ಪ್ರೆಸ್‌ ಕಲಬುರಗಿಯಿಂದ ಹೊರಟಿದೆ ಎಂದರು.

ಡಿ.ಸಿ.ಪಿ ಕಿಶೋರ್ ಬಾಬು, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಸ್ಟೇಷನ್‌ ಮಾಸ್ಟರ್ ಪ್ರಸಾದ ರಾವ್ ಸೇರಿದಂತೆ ಇನ್ನಿತರ ಅಧಿಕಾರಿಗಳು ವಲಸಿಗ ಕಾರ್ಮಿಕರನ್ನು ಬೀಳ್ಕೊಟ್ಟರು.

Leave a Comment