ಶ್ರಮಜೀವಿ ಬಿಎಸ್‌ವೈಗೆ ಹುಟ್ಟುಹಬ್ಬ ಪ್ರಧಾನಿ ಶುಭಾಶಯ

ಬೆಂಗಳೂರು, ಫೆ. ೨೭- ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇಂದು ೭೮ನೇ ಹುಟ್ಟುಹಬ್ಬದ ಸಂಭ್ರಮ. ಮುಖ್ಯಮಂತ್ರಿ ಯಡಿಯೂರಪ್ಪನವರ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ಕೇಂದ್ರದ ಹಲವು ಸಚಿವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.
ಇಂದು ಬೆಳಿಗ್ಗೆಯೇ ಪ್ರಧಾನಿ ನರೇಂದ್ರಮೋದಿ ಟ್ವೀಟ್ ಮೂಲಕ ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿ, ಕರ್ನಾಟಕ ಶ್ರಮ ಜೀವಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜನ್ಮದಿನದ ಶುಭಾಶಯ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ರಾಜ್ಯದ ಅಭಿವೃದ್ಧಿ, ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿಗಾಗಿ ಅವಿರತ ದುಡಿಯುತ್ತಿರುವ ಯಡಿಯೂರಪ್ಪನವರಿಗೆ ದೇವರು ಆಯಸ್ಸು, ಆರೋಗ್ಯ ಕೊಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ನಲ್ಲಿ ಶುಭ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಶುಭ ಹಾರೈಸಿದ ಬೆನ್ನಲ್ಲೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹ ಯಡಿಯೂರಪ್ಪನವರಿಗೆ ಶುಭ ಹಾರೈಸಿದ್ದು, ಬೆಳಿಗ್ಗೆಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಅಮಿತ್ ಶಾ ದೂರವಾಣಿ ಕರೆ ಮಾಡಿ ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಹ ಬೆಳಿಗ್ಗೆಯೇ ಯಡಿಯೂರಪ್ಪನವರಿಗೆ ದೂರವಾಣಿ ಕರೆ ಮಾಡಿ ಜನ್ಮದಿನದ ಶುಭಾಶಯ ಕೋರಿದರು. ಆಗ ಯಡಿಯೂರಪ್ಪನವರು ನೀವು ಇದ್ದ ಕಾವೇರಿಯಲ್ಲೇ ಇಂದಿನಿಂದ ವಾಸ್ತವ್ಯ ಹೂಡುತ್ತಿದ್ದೇನೆ. ಈ ನಿವಾಸ ನಿಮಗೆ ಶುಭವಾದಂತೆ ನನಗೂ ಶುಭ ತರಲಿ ಎಂದು ಲೋಕಾಭಿರಾಮವಾಗಿ ಮಾತನಾಡಿದರು.
ಹೆಚ್‌ಡಿಕೆ ಪತ್ರ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಮ್ಮ ಆಪ್ತ ಸಹಾಯಕನ ಮೂಲಕ ಶುಭಾಶಯ ಪತ್ರ ಕಳುಹಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ವಯಸ್ಸು ೭೭ ಆದರೂ ಈಗಲೂ ೧೮ರ ಯುವಕನಂತೆ ಚೈತನ್ಯದ ಚಿಲುಮೆಯಾಗಿ ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಮ್ಮ ಗುರಿ ಈಡೇರಲೆಂದು ಹಾರೈಸುತ್ತೇನೆ. ಈ ಶುಭ ಸಂದರ್ಭದಲ್ಲಿ ತಾವು ನೂರು ಕಾಲ ಬಾಳಿ, ಇನ್ನು ಹೆಚ್ಚಿನ ಉನ್ನತ ಸ್ಥಾನಕ್ಕೇರಲಿ ಎಂದು ಆಶಿಸುತ್ತೇನೆ ಎಂದು ಕುಮಾರಸ್ವಾಮಿ ಶುಭಾಶಯ ಪತ್ರದಲ್ಲಿ ತಿಳಿಸಿದ್ದಾರೆ.
ನಿಮ್ಮ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅಪೇಕ್ಷೆಯಿತ್ತು. ಆದರೆ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿರುವ ಕಾರಣ ಅನಿವಾರ್ಯತೆಯಿಂದಾಗಿ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಯಡಿಯೂರಪ್ಪನವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.
ದವಳಗಿರಿಗೆ ಗಣ್ಯರ ದಂಡು
ಇಂದು ಬೆಳಿಗ್ಗೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರ ಡಾಲಱ್ಸ್ ಕಾಲೋನಿ ನಿವಾಸಕ್ಕೆ ಹಲವು ಗಣ್ಯರು ಆಗಮಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶುಭ ಹಾರೈಸಿದರು.
ಕುಟುಂಬಸ್ಥರು, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಹೀಗೆ ಎಲ್ಲರೂ ಬೆಳಿಗ್ಗೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆಗೆ ಬಂದು ಶುಭ ಹಾರೈಸಿ ಅವರ ಆಶೀರ್ವಾದ ಪಡೆದುಕೊಂಡರು.
ನಂತರ ಮುಖ್ಯಮಂತ್ರಿ ಯಡಿಯೂರಪ್ಪನವರು ದವಳಗಿರಿಯ ತಮ್ಮ ನಿವಾಸದಿಂದ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿದ್ದು, ಅಲ್ಲಿಯೂ ಸಹ ನೂರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿ ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಶುಭ ಕೋರಿದರು.

Leave a Comment