ಶ್ರದ್ಧಾ, ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

ರಾಯಚೂರು.ಫೆ.13- ಪ್ರತಿ ವರ್ಷದಂತೆ ಈ ವರ್ಷವೂ ನಗರ ಸೇರಿ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು.
ಶಿವರಾತ್ರಿ ನಿಮಿತ್ಯ ಇಂದು ಬೆಳಿಗ್ಗೆಯಿಂದಲೇ ವಿವಿಧ ದೇವಸ್ಥಾನಗಳಿಗೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದು ಪಾವನರಾದರು. ಬೆಳಿಗಿನ ಜಾವದಿಂದಲೇ ಮಹಾಶಿವರಾತ್ರಿ ದಿನದಂದು ಶಿವನ ದರ್ಶನ ಪಡೆದರೇ ಜನ್ಮ ಪಾವನವಾಗುತ್ತದೆಂಬ ನಂಬಿಕೆಯಿಂದ ಭಕ್ತಾದಿಗಳು ಅತ್ಯಧಿಕ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ನೆರವೇರಿಸುತ್ತಿರುವುದು ವಿಶೇಷವಾಗಿತ್ತು.
ಶಿವಲಿಂಗಕ್ಕೆ ಅಭಿಷೇಕ, ಬಿಲ್ವಾರ್ಚನೆ ಹಾಗೂ ರುದ್ರಾಭಿಷೇಕ ಸೇರಿ ಇನ್ನಿತರ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನಗರದ ಚಂದ್ರಮೌಳೇಶ್ವರ ದೇವಸ್ಥಾನ, ಶ್ರೀ ನಂದೀಶ್ವರ ದೇವಸ್ಥಾನ, ಶ್ರೀ ನಗರೇಶ್ವರ ದೇವಸ್ಥಾನ, ಏಗನೂರು ಟೆಂಪಲ್, ರಾಮಮಂದಿರ, ಈಶ್ವರ ದೇವಸ್ಥಾನ ಮತ್ತು ನೀಲಕಂಠೇಶ್ವರ ದೇವಸ್ಥಾನ, ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶಿವನ ದರ್ಶನ ಪಡೆಯಲು ಭಕ್ತಾದಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು. ಗಾಜಗಾರಪೇಟೆಯ ಶಂಕರ ಮಠದಲ್ಲಿ ಹೋಮ ಹವನ ನೆರವೇರಿಸಲಾಯಿತು.
ಶಿವರಾತ್ರಿಯನ್ನು ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಜಾಗರಣೆ ಮಾಡುತ್ತಾರೆ. ಮತ್ತೊಂದೆಡೆ ಯಾವುದೇ ಉಪಹಾರ ಸೇವಿಸದೆ ಉಪವಾಸ ವ್ರತ ಕೈಗೊಂಡು ಶಿವನ ಧ್ಯಾನದಲ್ಲಿ ಮಗ್ನರಾಗುವ ಮೂಲಕ ಇಡೀ ದಿನ ಶಿವನಾಮ ಸ್ಮರಣೆಯಲ್ಲಿ ನಿರತರಾಗಿರುತ್ತಾರೆ. ಅಲ್ಲದೇ, ವಿವಿಧ ದೇವಸ್ಥಾನಗಳಲ್ಲಿ ಸಂಜೆ ಅಹೋರಾತ್ರಿ ಭಜನೆ, ಶಿವಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

Leave a Comment