ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಮಠಗಳ ಪಾತ್ರ ಅನನ್ಯ

ತಿಪಟೂರು, ಆ.೧೩- ಸರ್ಕಾರದಿಂದಲೇ ಪೂರ್ಣ ಪ್ರಮಾಣದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಶಿಕ್ಷಣ ಸೇರಿದಂತೆ ಸರ್ಕಾರದ ಪ್ರಮುಖ ಉದ್ದೇಶಗಳು ಈಡೇರಲು ಖಾಸಗಿ ಸಹಭಾಗಿತ್ವ ಅತ್ಯಗತ್ಯ. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಲು ಖಾಸಗಿ ಶಿಕ್ಷಣ ಸಂಸ್ಥೆಗಳು, ಮಠ ಮಾನ್ಯಗಳ ಪಾತ್ರ ಅನನ್ಯವಾದುದು ಎಂದು ಶಾಸಕ ಕೆ. ಷಡಕ್ಷರಿ ಹೇಳಿದರು.

ನಗರದ ಎಸ್.ವಿ.ಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶ್ರೀ ಶಾರದಾ ಸಭಾಂಗಣದಲ್ಲಿ ಎಸ್.ವಿ.ಪಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಎನ್ಎಸ್ಎಂ ಬಾಲಕರ ಪ್ರೌಢಶಾಲೆ, ಎಸ್‌ವಿಪಿ ಪ್ರಾಥಮಿಕ ಪಾಠ ಶಾಲೆಗಳ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಿಪಟೂರು ತಾಲ್ಲೂಕು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಲು ಖಾಸಗಿ ಸಂಸ್ಥೆಗಳ ಪಾತ್ರ ಮುಖ್ಯವಾದುದು. ತಿಪಟೂರು ತಾಲ್ಲೂಕು ಹೊಸದಾಗಿ ಸರ್ಕಾರಿ ಡಿಪ್ಲೋಮಾ ಕಾಲೇಜು ಮಂಜೂರು ಮಾಡಿಸಲಾಗಿದೆ. ರಾಜ್ಯದಲ್ಲೇ ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ನಮ್ಮ ತಾಲ್ಲೂಕಿನ ಜನರಿಗೆ ಅನುಕೂಲವಾಗಬೇಕು ಮತ್ತು ಗುಣಮಟ್ಟದ ಶಿಕ್ಷಣ ದೊರೆಯಬೇಕು. ನಮ್ಮ ಮಕ್ಕಳು ರಾಜ್ಯ ಮತ್ತು ರಾಷ್ಟ್ರದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.

ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದರು ಕೆಲವರು ಪೂರ್ವಗ್ರಹ ಪೀಡಿತವಾಗಿ ಮಾತನಾಡುತ್ತಿದ್ದಾರೆ. ಅನಾವಶ್ಯಕವಾಗಿ ಮಾತನಾಡುತ್ತಿದ್ದಾರೆ. ಮಾಡುವ ಯೋಗ್ಯತೆ ಇಲ್ಲದಿದ್ದರೆ ನೋಡುವ ಸಹನೆ ಇರಬೇಕು. ನಾನು ಎಂದೂ ತಿಪಟೂರು ಕೆರೆಗೆ ನೀರು ಬಿಡುವುದಿಲ್ಲ ಎಂದು ಹೇಳಿಲ್ಲ. ಇವರು ಶಾಸಕರಾಗಿದ್ದ ಅವಧಿಯಲ್ಲಿ ಏರಿ ರಿಪೇರಿ ಮಾಡಿ ಸರಿಯಾದ ಅಭಿವೃದ್ಧಿ ಮಾಡಿದ್ದರೆ ನಾನೇಕೆ ರಿಪೇರಿಗೆ ಕೈಹಾಕುತ್ತಿದ್ದೆ. ನನಗೆ ಅಭಿವೃದ್ಧಿ ಬಗ್ಗೆ ಚಿಂತನೆ ಇದೆ. ಟೀಕೆ ಮಾಡುವ ಮೊದಲು, ಏಕವಚನ ಬಳಸುವ ಮೊದಲು ಅರಿವಿಟ್ಟುಕೊಂಡು ಮಾತನಾಡಲಿ, ನನ್ನ ಮೇಲಿನ ಟೀಕೆಗೆ ನಾನು ಹೆದರುವುದಿಲ್ಲ. ನನ್ನ ಅವಧಿಯಲ್ಲಿನ ಅಭಿವೃದ್ಧಿ ಜನಸಾಮಾನ್ಯರ ಕಣ್ಣಿಗೆ ಕಾಣುತ್ತಿವೆ. ನಾನು ಮಾಡುವ ಕೆಲಸಕ್ಕೆ ಸಾಧ್ಯವಾದರೆ ಕೈ ಜೋಡಿಸಲಿ, ಅನಗತ್ಯ ಕಲ್ಲು ಹಾಕುವ ಕೆಲಸ ಮಾಡಬಾರದು ಎಂದರು.

ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿ ಜಗದೀಶ್, ತುಮಕೂರು ಡಯಟ್ ಉಪನ್ಯಾಸಕ ಪ್ರಭುಸ್ವಾಮಿ, ಬಿಇಓ ಮಂಗಳಗೌರಿ, ಉಪನ್ಯಾಸಕರಾದ ರೇಣುಕಯ್ಯ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Leave a Comment