ಶೇ. 7.5 ರಷ್ಟು ಮೀಸಲಾತಿಗಾಗಿ ವಿಧಾನಸೌಧಕ್ಕೆ ಮುತ್ತಿಗೆ

ಬೆಂಗಳೂರು, ಜೂ. ೨೫- ಪರಿಶಿಷ್ಟ ಪಂಗಡಕ್ಕೆ ಶೇ. 7.5 ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ರವರ ನೇತೃತ್ವದಲ್ಲಿ ನಗರದಲ್ಲಿಂದು ನಡೆದ ಬೃಹತ್ ಪ್ರತಿಭಟನೆಯಿಂದಾಗಿ ರಾಜಧಾನಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಹೈರಾಣರಾಗಿ ಪರದಾಡುವಂತಾಯಿತು.
ಪ್ರತಿಭಟನಾಕಾರರು ರಾಜಭವನ, ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ರಸ್ತೆಗಳಲ್ಲೇ ಕುಳಿತು ಧರಣಿ ನಡೆಸಿದ್ದರಿಂದ ನಗರದ ಹೃದಯ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಬಹುತೇಕ ಪ್ರಮುಖ ರಸ್ತೆಗಳಲ್ಲಿ ಮೈಲುಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಆಮೆ ವೇಗದಲ್ಲಿ ವಾಹನಗಳು ಸಾಗುವಂತಾಯಿತು.
ಕಳೆದ 17 ದಿನಗಳ ಹಿಂದೆ ವಾಲ್ಮೀಕಿ ಗುರುಪೀಠ ಇರುವ ದಾವಣಗೆರೆಯ ರಾಜನಹಳ್ಳಿಯಿಂದ ಸ್ವಾಮೀಜಿ ರವರ ನೇತೃತ್ವದಲ್ಲಿ ಆರಂಭವಾಗಿದ್ದ ಬೃಹತ್ ಪಾದಯಾತ್ರೆ ಜಗಳೂರು, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಸಿರಾ, ತುಮಕೂರು, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಶಿಡ್ಲಘಟ್ಟ, ಹೊಸಕೋಟೆಯಿಂದ ಸಾಗಿ ಕೆಆರ್ ಪುರಂ ಮೂಲಕ ರಾಜಧಾನಿ ಬೆಂಗಳೂರನ್ನು ಪ್ರವೇಶಿಸಿದ್ದು, ಮೆರವಣಿಗೆಯಲ್ಲಿ ಬಂದ ನೂರಾರು ಮಂದಿ ಮೊದಲಿಗೆ ರಾಜಭವನದ ರಸ್ತೆ ಮೂಲಕ ಸಾಗಿ ಶಾಸಕರ ಭವನದ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಅಲ್ಲಿಂದ ಮೆರವಣಿಗೆಯಲ್ಲೇ ಸ್ವತಂತ್ರ ಉದ್ಯಾನವನಕ್ಕೆ ಆಗಮಿಸಿದರು.
ಈ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಪರದಾಡಿದರು.
ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಕೆಲ ಪ್ರತಿಭಟನಾಕಾರರು ವಿಧಾನಸೌಧಕ್ಕೂ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದ್ದು, ಪೊಲೀಸರು ಅವರನ್ನೆಲ್ಲ ನಿಭಾಯಿಸಿ ಸ್ವತಂತ್ರ ಉದ್ಯಾನವನಕ್ಕೆ ತೆರಳುವಂತೆ ನೋಡಿಕೊಂಡರು.
ಸ್ವತಂತ್ರ ಉದ್ಯಾನವನದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸ್ವತಂತ್ರ ಉದ್ಯಾನವನದ ಮುಂಭಾಗದ ರಸ್ತೆಗಳಲ್ಲೆ ಕುಳಿತಿರುವ ನೂರಾರು ಮಂದಿ ಪ್ರತಿಭಟನಾಕಾರರು, ಮುಖ್ಯಮಂತ್ರಿ ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ, ಸಮಾಜ ಕಲ್ಯಾಣ ಸಚಿವರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಕೆಂಪೇಗೌಡ ರಸ್ತೆ, ಗಾಂಧಿನಗರ, ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಶೇಷಾದ್ರಿ ರಸ್ತೆ, ಕೆಆರ್ ವೃತ್ತ, ವಿಧಾನಸೌಧ, ನೃಪತುಂಗ ರಸ್ತೆ, ಕಾರ್ಪೋರೇಷನ್ ವೃತ್ತ ಸೇರಿದಂತೆ ಎಲ್ಲೆಡೆ ಸಂಚಾರ ದಟ್ಟಣೆಯಾಗಿ ವಾಹನಗಳು ತೆವಳಿಕೊಂಡೇ ಸಾಗಿವೆ.
ವಾಲ್ಮೀಕಿ ಸಮುದಾಯದ ಎಲ್ಲ ಸಂಘಟನೆಯ ಪದಾಧಿಕಾರಿಗಳು, ಮುಖಂಡರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಧರಣಿ ಸ್ಥಳಕ್ಕೆ ಸಚಿವ ತುಕಾರಾಂ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಮುಖ್ಯಮಂತ್ರಿಗಳು ಬರುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರು ಪಟ್ಟು ಹಿಡಿದು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
 ಮೀಸಲಾತಿ ನೀಡಲೇಬೇಕು
ಈ ಪ್ರತಿಭಟನೆಯಲ್ಲಿ ಮಾತನಾಡಿದ ವಾಲ್ಮೀಕಿ ಸಮುದಾಯದ ಮುಖಂಡರು, ರಾಜ್ಯದಲ್ಲಿ ಸುಮಾರು 70 ಲಕ್ಷ ವಾಲ್ಮೀಕಿ ಸಮುದಾಯದವರಿದ್ದು ಪರಿಶಿಷ್ಟ ಪಂಗಡಲ್ಲೇ ಪ್ರಬಲ ಸಮಾಜವಾಗಿದೆ. ಹಾಗಾಗಿ ಕೇಂದ್ರದ ಮಾದರಿಯಲ್ಲೇ ರಾಜ್ಯದಲ್ಲೂ ಶೇ. 7.5 ರಷ್ಟು ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಸಮುದಾಯ ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತಗೊಂಡಿದೆ. ಸಮುದಾಯದ ಪ್ರಗತಿಗಾಗಿ ಶೇ. 78.5 ರಷ್ಟು ಮೀಸಲಾತಿಯನ್ನು ತಕ್ಷಣವೇ ಘೋಷಿಸಬೇಕು ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ 17 ದಿನಗಳ ಹಿಂದೆಯೇ ಪಾದಯಾತ್ರೆ ಆರಂಭಿಸಿದ್ದರೂ ಈ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ. ಪಾದಯಾತ್ರೆ ರಾಜಧಾನಿ ಪ್ರವೇಶಿಸಿದ್ದರು ಆಡಳಿತ ನಡೆಸುವುರು ಸುಮ್ಮನಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಮುಗಿಲು ಮುಟ್ಟದಿ ಘೋಷಣೆ
ಪ್ರತಿಭಟನಾನಿರತರು ಮೀಸಲಾತಿಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದು ಮೀಸಲಾತಿ ಜಾರಿ ಮಾಡದ ಸರ್ಕಾರದ ವಿರುದ್ಧವೂ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Leave a Comment