ಶೆಡ್ ಹೋಟೆಲ್‌ನಲ್ಲಿ ತಿಂಡಿ ತಿಂದ ಶಿವಣ್ಣ

ಮಂಡ್ಯ, ಫೆ ೧೧- ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮತ್ತೆ ರಸ್ತೆ ಬದಿಯ ಶೆಡ್ ಹೋಟೆಲ್‌ಗೆ ಭೇಟಿ ನೀಡಿ ಉಪಹಾರ ಸೇವಿಸಿ ಸರಳತೆ ಮೆರೆದಿದ್ದಾರೆ.

ಶಿವಣ್ಣ ಇತ್ತೀಚೆಗೆ ಮಂಡ್ಯದ ತಮ್ಮ ನೆಚ್ಚಿನ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸವಿದಿರುವ ಫೋಟೋಗಳು ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಅಭಿಮಾನಿಗಳು ಶಿವಣ್ಣನ ಸರಳತೆಗೆ ಮನಸೋತಿದ್ದಾರೆ.

ಹೌದು. ಹಲಗೂರಿನಲ್ಲಿರುವ ಬಾಬು ಶೆಡ್ ಹೊಟೇಲ್ ಎಂದರೆ ಶಿವರಾಜ್‌ಕುಮಾರ್ ಅವರಿಗೆ ತುಂಬಾ ಇಷ್ಟ. ಈ ಭಾಗದಲ್ಲಿ ಹೋಗುವಾಗ ಈ ಹೊಟೇಲಿಗೆ ಶಿವಣ್ಣ ಮಿಸ್ ಮಾಡದೇ ಭೇಟಿ ಕೊಡುತ್ತಾರೆ. ಇಲ್ಲಿ ಮಾಡುವ ದೋಸೆ, ಚಿತ್ರಾನ್ನ ಎಂದರೆ ಶಿವಣ್ಣ ಇಷ್ಟಪಟ್ಟು ತಿನ್ನುತ್ತಾರೆ. ಹಲವು ವರ್ಷಗಳಿಂದ ಶಿವರಾಜ್‌ಕುಮಾರ್ ಈ ಹೊಟೇಲ್‌ಗೆ ಬರುತ್ತಿದ್ದಾರೆ.

ಕಳೆದ ೬೦ ವರ್ಷಗಳಿಂದ ಬಾಬು ಹೊಟೇಲ್ ಹಲಗೂರಿನಲ್ಲಿದ್ದು, ಅವರ ತಂದೆ ವೀರಭದ್ರಪ್ಪ ಅವರು ಈ ಹೊಟೇಲ್‌ನ್ನು ಪ್ರಾರಂಭ ಮಾಡಿದ್ದರು. ಈಗ ಬಾಬು ಅವರು ಈ ಹೊಟೇಲ್ ನಡೆಸುತ್ತಿದ್ದು, ಸುತ್ತಮುತ್ತಲು ಬಾಬು ಹೊಟೇಲ್ ಎಂದೇ ಫೇಮಸ್ ಆಗಿದೆ. ಇಲ್ಲಿನ ಶುಚಿ ಮತ್ತು ರುಚಿಗಾಗಿ ಜನರು ಮುಗಿ ಬೀಳುತ್ತಾರೆ.

ಶಿವರಾಜ್‌ಕುಮಾರ್ ಅವರು ಮುತ್ತತ್ತಿ, ಮಲೆಮಹದೇಶ್ವರಬೆಟ್ಟ, ಸಿಂಗನಲ್ಲೂರು, ಗಾಜನೂರು, ಮೈಸೂರು ಭಾಗಗಳಿಗೆ ಹೋಗುವ ವೇಳೆ ಇದೇ ರಸ್ತೆಯಲ್ಲಿ ಹೋಗುತ್ತಾರೆ. ಹೋಗುವ ವೇಳೆ ತಮ್ಮ ಸ್ನೇಹಿತರೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಈ ಬಾಬು ಹೊಟೇಲ್‌ಗೆ ಹೋಗಿ ಇಲ್ಲಿ ತಯಾರಾಗುವ ತಿಂಡಿಯನ್ನು ಸವಿಯುತ್ತಾರೆ. ತಿಂಡಿ ತಿಂದ ನಂತರ ಶಿವಣ್ಣ ತಮ್ಮ ತಟ್ಟೆಯನ್ನು ತಾವೇ ಎತ್ತು ಹಾಕುತ್ತಾರೆ. ಶಿವಣ್ಣ ಅವರ ಈ ಸರಳತೆಗೆ ಇಲ್ಲಿನ ಜನರು ಸಹ ಮಾರು ಹೋಗಿದ್ದಾರೆ.

Leave a Comment