ಶೂದ್ರ ಸಮುದಾಯದ ಏಳ್ಗೆಗೆ ದುಡಿದ ನಾರಾಯಣಗುರು

ತುಮಕೂರು, ಸೆ. ೧೧- ಅನಾದಿ ಕಾಲದಿಂದಲೂ ಶೋಷಣೆಗೊಳಗಾಗಿ ಬದುಕುತ್ತಿದ್ದ ಶೂದ್ರ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದ ದಾರ್ಶನಿಕರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಒಬ್ಬರು ಎಂದು ಶಾಸಕ ಜಿ.ಬಿ. ಜೋತಿಗಣೇಶ್ ಹೇಳಿದರು.

ನಗರದ ಬಾಲಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಗದ್ಗುರು ಶ್ರೀನಾರಾಯಣ ಸಮಾಜ ಟ್ರಸ್ಟ್ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದಂತಹ ರಾಜ್ಯದಲ್ಲಿ ತಾಂಡವವಾಡುತ್ತಿದ್ದ ಜಾತೀಯತೆ, ಅಸ್ಪೃಶ್ಯತೆಯ ವಿರುದ್ದ ಹೋರಾಡುತ್ತಲೇ ಶೂದ್ರರಿಗೆ ಸಿಗಬೇಕಾದ ಎಲ್ಲಾ ಗೌರವಗಳನ್ನು ದೊರಕಿಸಿಕೊಡಲು ಪ್ರಯತ್ನಿಸಿದರು. ಯಾವ ದೇವಾಲಯಗಳಿಗೆ ಪ್ರವೇಶ ಇರಲಿಲ್ಲವೋ ಅಂತಹ ದೇವಾಲಯಗಳ ಬದಲಿಗೆ ತಾವೇ ದೇವಾಲಯಗಳನ್ನು ನಿರ್ಮಿಸಿ, ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಶೂದ್ರ ಸಮುದಾಯ ಪೂಜೆ ಸಲ್ಲಿಸುವಂತೆ ಮಾಡಿದವರು ನಾರಾಯಣ ಗುರುಗಳು. ಕಾವಿ ತೊಡದಿದ್ದರೂ, ಬಿಳಿಯ ದೋತರ ತೊಟ್ಟು ಸನ್ಯಾಸಿಯಂತೆ ಬದುಕಿದರು ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಬಹಳ ಪ್ರಮುಖ ಹೇಳಿಕೆಗಳಾದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬುದು ಪ್ರಸ್ತುತ ಅತ್ಯಂತ ಅಗತ್ಯವಾಗಿದೆ. ಅತ್ಯಂತ ಕೀಳು ಮಟ್ಟದಲ್ಲಿ ಬದುಕುತ್ತಿದ್ದ ಸಮುದಾಯವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದ ಅವರ ಆದರ್ಶ ನಮ್ಮೆಲ್ಲರಿಗೂ ದಾರಿ ದೀಪವಾಗಬೇಕು ಎಂದು ಹೇಳಿದರು.

ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತು ತುಮಕೂರು ವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಸಾಲಿನಾಯ ವಿಶೇಷ ಉಪನ್ಯಾಸ ನೀಡಿ, ಜಾತಿಯತೆ, ಅಸ್ಪೃಶ್ಯತೆಯಿಂದ ನರಳುತ್ತಿದ್ದ, ವಿವೇಕಾನಂದರಿಂದ ನರಕ ಎಂದು ಕರೆಯಲ್ಪಟ್ಟಿದ್ದ ಕೇರಳವನ್ನು ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ತನ್ನ ನುಡಿಯ ಮೂಲಕ ಸಾಮಾಜಿಕವನ್ನು ಎಲ್ಲಾ ವರ್ಗಗಳಲ್ಲಿ ಸಮಾನತೆ ತರಲು ಪ್ರಯತ್ನಿಸಿದ ನಾರಾಯಣ ಗುರುಗಳು ರಕ್ತ ರಹಿತ ಕ್ರಾಂತಿಯನ್ನೇ ನಡೆಸಿದರು. ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲವುಳ್ಳರಾಗಿ ಎಂಬ ಅವರ ಕರೆ, ಇಡೀ ಶೂದ್ರ ಸಮುದಾಯಕ್ಕೆ ಹೊಸ ಚೈತನ್ಯವನ್ನು ತಂದುಕೊಟ್ಟಿತ್ತು ಎಂದರು.

ವಿಶ್ವ ಸಂಸ್ಥೆ ಮತ್ತು ಇನ್ನಿತರ ಸಂಘಟನೆಗಳು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಪ್ರಪಂಚದಲ್ಲಿಯೇ ಹೆಚ್ಚು ಜಾತಿಯತೆಯಿರುವ ರಾಷ್ಟ್ರಗಳಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಜಾತಿ ಮತ್ತು ಧರ್ಮ ಆಧಾರಿತ ಹಿಂಸೆಯಲ್ಲಿ ಸುಮಾರು 5.60 ಲಕ್ಷ ಜನರು ಸಾಯುತ್ತಿದ್ದು, ಈ ವಿಚಾರದಲ್ಲಿಯೂ ಭಾರತ ಮುಂದಿದೆ. ಜಾತಿಯನ್ನು ಸಾಂಸ್ಕೃತಿಕ ಅಸ್ಮಿತೆಗಾಗಿ ಬಳಸಿಕೊಳ್ಳುವುದಕ್ಕಿಂತ ರಾಜಕೀಯ ಲಾಭ ಬಳಸಿಕೊಳ್ಳುವ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿವೆ. ಈಡಿಗ, ಬಿಲ್ಲವ ಸಮಾಜ ಇಂತಹ ಪಾಪ ಕೂಪದಲ್ಲಿ ಬೀಳದೆ ಎಲ್ಲರನ್ನು ಒಳಗೊಂಡು ಸಮಾಜವಾಗಿ ಬದುಕುವಂತಾದಾಗ ಮಾತ್ರ ನಾರಾಯಣ ಗುರುಗಳ ಜಯಂತಿ ಆಚರಣೆ ನಿಜವಾದ ಅರ್ಥ ಬರುತ್ತದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ರಂಗಸ್ವಾಮಯ್ಯ, ಪ್ರಸ್ತುತ ರಾಜ್ಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿ ನಡೆಯುತ್ತಿದ್ದರೆ ಅದಕ್ಕೆ ಕಾರಣ ದಿ. ಜೆ.ಪಿ.ನಾರಾಯಣಸ್ವಾಮಿ ಅವರು. ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಅವರು, ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರ ಪರಿಣಾಮ ಇಂದು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲ್ಪಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸಮುದಾಯದ ಅಭಿವೃದ್ಧಿಗಾಗಿ ದುಡಿದ ಕೆಪಿಎಸ್‌ಸಿ ಸದಸ್ಯ ಡಾ. ಲಕ್ಷ್ಮಿನರಸಯ್ಯ, ಉನ್ನಿಕೃಷ್ಣನ್, ಸುಕುಮಾರ್, ನಾರಾಯಣಸ್ವಾಮಿ, ಕೆ.ಕೆ.ಮಾಧವನ್ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಬಿ.ಕೆ. ಸುವರ್ಣ, ಕೆ.ವಿ. ಅಜಯ್‌ಕುಮಾರ್, ಮಾಧವನ್, ಜೆ.ಪಿ. ಗ್ರೂಪ್‌ನ ಮುಖ್ಯಸ್ಥ ಜೆ.ಪಿ. ಸುಧಾಕರ್, ಡಿಡಿಪಿಐ ಮಂಜುನಾಥ್, ಸದಾಶಿವ ಅಮೀನ್, ಮಲ್ಲಸಂದ್ರ ಶಿವಣ್ಣ, ಪಾಲಿಕೆ ಸದಸ್ಯರಾದ ಗಿರಿಜಾ, ವಿಷ್ಣುವರ್ಧನ್, ಧನಿಯಾಕುಮಾರ್, ವೇದಮೂರ್ತಿ, ಸುಭಾಷ್ ಸುವರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪ್ಪಿನಕಟ್ಟೆ, ತಹಶೀಲ್ದಾರ್ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Comment