ಶೂಟರ್ ಸೌರಭ್ ವಿಶ್ವ ಜೂನಿಯರ್ ಚಾಂಪಿಯನ್

ಚಾಂಗ್ವಾನ್, ಸೆ.೬- ಇತ್ತೀಚೆಗೆ ಇಂಡೊನೇಷಿಯಾ ಹಾಗೂ ಜಕಾರ್ತನಲ್ಲಿ ಕೊನೆಗೊಂಡ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ೧೬ರ ಬಾಲಕ ಸೌರಭ್ ಚೌದರಿ ಮತ್ತೆ ತನ್ನ ಚಿನ್ನದ ಬೇಟೆಯನ್ನು ಮುಂದುವರೆಸಿದ್ದಾರೆ. ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ಐಎಸ್‌ಎಸ್‌ಎಫ್ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಜೂನಿಯರ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಇಂದು ನಡೆದ ಜೂನಿಯರ್ ೧೦ ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಉತ್ತರಪ್ರದೇಶದ ಮೀರತ್‌ನ ಸೌರಭ್ ತನ್ನದೇ ವಿಶ್ವ ದಾಖಲೆಯನ್ನು ಮುರಿದು ಚಿನ್ನಕ್ಕೆ ಮುತ್ತಿಟ್ಟರು. ಕೊರಿಯಾದ ಹೋಜಿನ್ ಲಿಮ್ ಹಾಗೂ ಭಾರತದ ಅರ್ಜುನ್ ಸಿಂಗ್ ಚೀಮಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದಾರೆ. ೨೪೫.೫ ಅಂಕ ಗಳಿಸಿದ ಸೌರಭ್ ಈ ವರ್ಷದ ಜೂನ್‌ನಲ್ಲಿ ತಾನೇ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

ಕಳೆದ ತಿಂಗಳು ಇಂಡೋನೇಷಿಯಾದ ಪಾಲೆಂಬಾಂಗ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಉತ್ತರಪ್ರದೇಶ ಮೀರತ್‌ನ ಹಳ್ಳಿ ಮೂಲದ ರೈತನ ಮಗನಾದ ಸೌರಭ್ ೧೦ ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲೇ ೨೪೦.೭ ಮೀಟರ್ ದೂರದವರೆಗೆ ಗುರಿ ಇಡುವ ಮೂಲಕ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದರು, ಅದೇ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮಾ ಕಂಚು ಜಯಿಸಿದ್ದರು.

ಯುವ ಶೂಟಿಂಗ್ ಸ್ಟಾರ್‌ಗೆ ಈ ವರ್ಷ ಅದ್ಬುತವಾಗಿದೆ. ಜರ್ಮನಿಯಲ್ಲಿ ನಡೆದ ಐಎಸ್‌ಎಸ್‌ಎಫ್ ಜ್ಯೂನಿಯರ್ ವರ್ಲ್ಡ್ ಕಪ್ ನಲ್ಲಿ ಚಿನ್ನದ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡಿದ್ದರು. ಇದಕ್ಕೂ ಮೊದಲು ೨೦೧೭ ಡಿಸೆಂಬರ್‌ನಲ್ಲಿ ಯುತ್ ಓಲಿಂಪಿಕ್ಸ್ ಗೇಮ್ಸ್ ಗೆ ಕೂಡ ಅವರು ೨೪೩.೧ ಅಂಕ ಪಡೆದು ಚಿನ್ನದ ಪದಕ ಗೆದ್ದಿದ್ದರು.

Leave a Comment