ಶುಲ್ಕ ಪಾವತಿಸದ್ದಕ್ಕೆ ಮಕ್ಕಳನ್ನು ಕೂಡಿ ಹಾಕಿದ ಶಾಲಾಡಳಿತ

ಹೊಸದಿಲ್ಲಿ,ಜು.೧೧- ಶಾಲಾ ಶುಲ್ಕ ಪಾವತಿಸದ ಪುಟಾಣಿ ವಿದ್ಯಾರ್ಥಿ ಬೇಸ್‌ಮೆಂಟ್‌ನಲ್ಲಿ ಕೂಡಹಾಕಿದ ಆಘಾತಕಾರಿ ಘಟನೆ ವರದಿಯಾಗಿದೆ.

ದಿಲ್ಲಿಯ ಪ್ರತಿಷ್ಠಿತ ಶಾಲೆ ರಾಬಿಯಾ ಗರ್ಲ್ಸ್ ಪಬ್ಲಿಕ್ ಸ್ಕೂಲ್‌ನ ಆಡಳಿತ ಮಂಡಳಿಯಿಂದ ಕೆಲವು ತಾಸುಗಳ ಕಾಲ ಒತ್ತೆಸೆರೆಯಲ್ಲಿ ಇರಿಸಲಾದ ಪುಟಾಣಿಗಳು ನಾಲ್ಕರಿಂದ ಐದು ವರ್ಷ ಪ್ರಾಯದವರಾಗಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲು ಬಂದಾಗಲೇ “ಮಕ್ಕಳ ಒತ್ತೆ ಸೆರೆ’ ಪ್ರಕರಣ ಬೆಳಕಿಗೆ ಬಂದಿದೆ.

ಶಾಲೆಯ ತರಗತಿ ಕೋಣೆಯಲ್ಲಿ ತಮ್ಮ ಮಕ್ಕಳು ಇಲ್ಲದಿರುವುದನ್ನು ಕಂಡ ಹೆತ್ತವರು ಶಾಲಾ ಸಿಬಂದಿಯನ್ನು ಪ್ರಶ್ನಿಸಿದಾಗ ಶಾಲಾ ಶುಲ್ಕ ಬಾಕಿ ಇರುವುದರಿಂದ, ಶಾಲಾ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಮಕ್ಕಳನ್ನು ಕೂಡಿಟ್ಟಿರುವುದಾಗಿ ನಿರ್ಲಕ್ಷ್ಯದಿಂದ ಎಂದು ಉತ್ತರಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಪೋಷಕರು ಸಮೀಪದ ಪೊಲೀಸ್ ಠಾಣೆಯಲ್ಲಿ ಶಾಲಾಡಳಿತದ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಮಕ್ಕಳನ್ನು ಬಿಡಲು ನಾವು ಪದೇ ಪದೇ ಮನವಿ ಮಾಡಿದರೂ ಶಾಲಾಡಳಿತ ಒಪ್ಪದೆ ಸುಮಾರು ಐದು ತಾಸು ಕಾಲ ತಳ ಅಂತಸ್ತಿನಲ್ಲಿ ಮಕ್ಕಳನ್ನು ಒತ್ತೆ ಇರಿಸಿಕೊಂಡರು ಎಂದು ಹೆತ್ತವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಕೆಲವು ಹೆತ್ತವರು “ನಾವು ಮಕ್ಕಳ ಫೀಸನ್ನು ಮುಂಗಡವಾಗಿ ಪಾವತಿಸಿದ್ದೇವೆ; ಆದರೂ ನಮ್ಮ ಮಕ್ಕಳನ್ನು ಒತ್ತೆ ಸೆರೆಯಲ್ಲಿ ಇರಿಸಿಕೊಂಡಿದ್ದಾರೆ’ ಎಂದು ದೂರಿದರು.

Leave a Comment