ಶುದ್ಧ ನೀರು ಘಟಕಗಳ ಅವ್ಯವಹಾರ ಸದನ ಸಮಿತಿ ರಚನೆಗೆ ಬಿಜೆಪಿ ಆಗ್ರಹ

ಬೆಂಗಳೂರು, ಫೆ. ೧೨- ರಾಜ್ಯದಲ್ಲಿ ಪ್ರಾರಂಭಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದ್ದು, ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೆ, ಅಧೋಗತಿಗೆ ತಲುಪಿವೆ. ಈ ಸಂಬಂಧ ತನಿಖೆಗೆ ಸದನ ಸಮಿತಿ ರಚಿಸುವಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನ ಪರಿಷತ್‌ನಲ್ಲಿಂದು ಸದನದ ಬಾವಿಗಿಳಿದು ಧರಣಿ ನಡೆಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆದಿದ್ದರೂ, ಸರ್ಕಾರ ಏನೂ ಆಗಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದೆ. ಸದನ ಸಮಿತಿ ರಚಿಸಿ ಎಂದು ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಪ್ರಭುನಾಥ್ ರಾವ್ ಮಲ್ಕಾಪುರೆ ಅವರ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ನೀಡಿದ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಸರ್ಕಾರ ಬದ್ಧವಾಗಿದೆ. 16 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 600ಕ್ಕೂ ಹೆಚ್ಚು ಘಟಕಗಳು ದುರಸ್ತಿಯಲ್ಲಿವೆ. ಅವುಗಳನ್ನು ರಿಪೇರಿ ಮಾಡಲಾಗುವುದು. ಈ ಸಂಬಂಧ ಜಲತಜ್ಞ ರಾಜಾರಾಮ್ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ರಚನೆ ಮಾಡಲಾಗಿದೆ. ಅದರ ವರದಿ ಬಂದ ನಂತರ, ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಸಚಿವರಿಗೆ ಸದನದ ಮೇಲೆ ನಂಬಿಕೆ ಇಲ್ಲ. ಅಧಿಕಾರಿಗಳ ಮೇಲೆ ನಂಬಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮಧ್ಯೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ವಿವಿಧ ಕಾರಣಗಳಿಂದ ನಾಲ್ಕು ದಿನಗಳಿಂದ ಅಧಿವೇಶನ ನಡೆದಿಲ್ಲ. ಇಂದೂ ಕೂಡ ಅಧಿವೇಶನ ನಡೆಯುವುದು ಬಿಜೆಪಿ ಸದಸ್ಯರಿಗೆ ಬೇಕಾಗಿಲ್ಲ ಎಂದರು.

ಈ ಹಂತದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಅವರು, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ನಾವು ಮಂತ್ರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿಲ್ಲ. ಈಗಾಗಿರುವ ಅವ್ಯವಸ್ಥೆ ಬಗ್ಗೆ ಸದನ ಸಮಿತಿ ರಚನೆ ಮಾಡಿ ಎಂದು ಹೇಳಿದರು. ಆಗ ಮಧ್ಯೆ ಪ್ರವೇಶಿಸಿದ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿ, ವಿರೋಧ ಪಕ್ಷದ ನಾಯಕರು ಹೇಳಿದಂತೆ, ಸರ್ಕಾರ ಉತ್ತರ ಕೊಡಬೇಕೆ, ನೀವು ಹೇಳಿದಂತೆಲ್ಲಾ ಮಾಡಲು ಆಗುವುದಿಲ್ಲ ಎಂದು ಪ್ರತಿಪಕ್ಷದ ಸದಸ್ಯರನ್ನು ಪ್ರಶ್ನಿಸಿದರು.

ಆಗ ಕೋಟಾ ಶ್ರೀನಿವಾಸ್ ಪೂಜಾರಿ, ನಾವು ಹೇಳಿದಂತೆ ಉತ್ತರ ಕೊಡಬೇಕೆಂದು ಹೇಳುತ್ತಿಲ್ಲ, ಸದನ ಸಮಿತಿಯನ್ನು ಈಗಲೇ ರಚಿಸಿ ಎಂದೂ ಹೇಳುತ್ತಿಲ್ಲ, ಸದನ ಸಮಿತಿ ರಚನೆ ಮಾಡುವ ಸಂಬಂಧ ನಿರ್ದೇಶನವನ್ನೂ ಕೊಡುತ್ತಿಲ್ಲ. ನಾವು ಬೇಡಿಕೆ ಸಲ್ಲಿಸುತ್ತಿದ್ದೇವೆ ಅಷ್ಟೇ ಎಂದು ಹೇಳಿದರು.

ಮತ್ತೆ ಕೃಷ್ಣಬೈರೇಗೌಡ ಮಾತು ಮುಂದುವರೆಸಿ, ರಾಜ್ಯದಲ್ಲಿ 18,582 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮಂಜೂರಾತಿ ನೀಡಿದ್ದು, 16,186 ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 600ಕ್ಕೂ ಹೆಚ್ಚು ಘಟಕಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿವೆ. ಅವುಗಳನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸಚಿವರ ಮಾತಿಗೆ ತೃಪ್ತರಾಗದ ಬಿಜೆಪಿ ಸದಸ್ಯರು, ಸದನ ಸಮಿತಿ ಬೇಕೇಬೇಕು ಎಂದು ಪಟ್ಟುಹಿಡಿದರು.

ಈ ಹಂತದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರುಗಳ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ ನಡೆದ ಹಿನ್ನೆಲೆಯಲ್ಲಿ ಸಭಾಪತಿಗಳು ಕಲಾಪವನ್ನು 1 ಗಂಟೆಗಳ ಕಾಲ ಮುಂದೂಡಿದರು.

Leave a Comment