ಶುದ್ಧ ನೀರು ಕೊಡಲು ಸಭೆಯಲ್ಲಿ ನಿರ್ಧಾರ

ಹುಳಿಯಾರು, ಜ. ೧೨- ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತು ಕೇಳಿ ಬಂದಾಗ ಬೋರನಕಣಿವೆಯಿಂದ ಪಟ್ಟಣಕ್ಕೆ ಸರಬರಾಜಾಗುತ್ತಿರುವ ನೀರು ಕಲ್ಮಶದಿಂದ ಕೂಡಿದ್ದು ಶುದ್ಧ ನೀರಿಲ್ಲದೆ ಸಮಸ್ಯೆಯಾಗಿದೆ ಎಂದು ಸದಸ್ಯ ಎಲ್.ಆರ್.ಚಂದ್ರಶೇಖರ್ ಆರೋಪಿಸಿದರು.

ಆದರೆ ಇದನ್ನು ನಿರಾಕರಿಸಿದ ಶಾಸಕರು ಶುದ್ಧೀಕರಣ ಘಟಕದಲ್ಲಿ ಸಮಸ್ಯೆಯಾಗುತ್ತಿಲ್ಲ. ಈ ಬಗ್ಗೆ  ಈಗಾಗಲೇ ನಾನು ಸ್ಥಳ ಪರಿಶೀಲನೆ ಮಾಡಿದ್ದೇನೆ, ಸಮಸ್ಯೆ ಕಂಡು ಬರುತ್ತಿರುವುದು ಪೈಪ್‌ಲೈನ್‌ನಲ್ಲಿ. ಪೈಪ್‌ಲೈನ್ ಸಾಕಷ್ಟು ಕಡೆ ಡ್ಯಾಮೇಜ್ ಆಗಿದ್ದು, ಇದರೊಂದಿಗೆ ಮಣ್ಣು ಸೇರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದರು.

ಮುಂದುವರೆದ ಚರ್ಚೆಯಲ್ಲಿ ಸಾಕಷ್ಟು ಕಡೆ ಪ್ರಭಾವಿಗಳು ರೈಸಿಂಗ್ ಸಂಪರ್ಕ ಹೊಂದಿದ್ದಾರೆ ಎಂದು ಮಹಿಳಾ ಸದಸ್ಯರುಗಳು ಆರೋಪಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಪಟ್ಟಣದಲ್ಲಿನ ಎಲ್ಲಾ ರೈಸಿಂಗ್ ಸಂಪರ್ಕವನ್ನು ನಿರ್ಧಾಕ್ಷಿಣ್ಯವಾಗಿ ಕಡಿತಗೊಳಿಸಿ ಹಾಗೂ ಅವಶ್ಯವಿದ್ದಲ್ಲಿ ಪೊಲೀಸರ ಸಹಾಯ ಪಡೆದು ಶೀಘ್ರ ಕಾರ್ಯೋನ್ಮುಖರಾಗುವಂತೆ ಸೂಚಿಸಿದರು.

ವಿದ್ಯುದ್ದೀಪ ಖರೀದಿಗೆ ಸೂಚನೆ
ಕಳೆದ ಹಲವಾರು ತಿಂಗಳಿನಿಂದ ಪಂಚಾಯಿತಿ ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಬೀದಿ ದೀಪ ಹಾಗೂ ಚರಂಡಿ ಸಮಸ್ಯೆ ಬಗ್ಗೆ ಸಾರ್ವಜನಿಕರು ಫೋನ್ ಮಾಡಿ ದೂರುತ್ತಿದ್ದಾರೆ. ಕೂಡಲೇ ದೀಪ ಖರೀದಿಸುವಂತೆ ಹಾಗೂ ತ್ಯಾಜ್ಯ ವಿಲೇವಾರಿಗೆ ಟ್ರ್ಯಾಕ್ಟರ್ ಖರೀದಿಸುವಂತೆ ಒತ್ತಾಯಿಸಿದರು.

ಆದರೆ ಈಗಿರುವ ಅನುದಾನದಲ್ಲಿ ಟ್ರ್ಯಾಕ್ಟರ್ ಖರೀದಿಗೆ ಹಣವಿಲ್ಲ, ತುರ್ತಾಗಿ ಬೀದಿ ದೀಪ ಕಟ್ಟಿಸಿ ಎಂದು ಶಾಸಕರು ಸೂಚಿಸಿದರು.

ಇ-ಸ್ವತ್ತು ಬಗ್ಗೆ ತಕರಾರು
ಆಸ್ತಿ ಪರಭಾರೆ ಮಾಡುವ ಸಂದರ್ಭದಲ್ಲಿ ಇ ಸ್ವತ್ತು ಅತ್ಯಗತ್ಯವಾಗಿದ್ದು, ಆದರೆ ಇ-ಸ್ವತ್ತು ತೆಗೆಯಲು ಪಂಚಾಯಿತಿಯಲ್ಲಿ ತಕರಾರು ಮಾಡುತ್ತಿದ್ದಾರೆ ಹಾಗೂ ಖಾತೆ ಮಾಡಲು ಸಾಧ್ಯವೇ ಇಲ್ಲ ಎಂದು ವಾಪಸ್ಸು ಕಳುಹಿಸುತ್ತಿದ್ದಾರೆ ಎಂಬ ಬಗ್ಗೆ ಸದಸ್ಯರುಗಳ ತಕರಾರಿಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಗ್ರಾಮ ಪಂಚಾಯಿತಿ ಆಗಿದ್ದ ಸಂದರ್ಭದಲ್ಲಿ ಇ-ಸ್ವತ್ತು ಅಗತ್ಯ. ಆದರೆ ಇದೀಗ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿರುವುದರಿಂದ ಇ-ಸ್ವತ್ತು ಬದಲು ಪ್ರಾಪರ್ಟಿ ಕಾರ್ಡ್ ಮಾಡಿಕೊಡಲಾಗುವುದಿದ್ದು, ಸ್ವಲ್ಪ ತಡವಾಗುತ್ತಿದೆ. ಇದಕ್ಕೆ ಎಲ್ಲರು ಸಹಕರಿಸಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರದೀಪ್ ವಹಿಸಿದ್ದರು. ಶಾಸಕ ಮಾಧುಸ್ವಾಮಿ ಸೇರಿದಂತೆ ‌ಉಪವಿಭಾಗಾಧಿಕಾರಿ ಪೂವಿತ, ಚಿಕ್ಕನಾಯಕನಹಳ್ಳಿ ಪ್ರಭಾರ ತಹಶೀಲ್ದಾರ್ ಮಂಜುನಾಥ್, ಹುಳಿಯಾರು ಪ.ಪಂ. ಮುಖ್ಯಾಧಿಕಾರಿ ಮಂಜುನಾಥ್ ಮತ್ತಿತರರು  ಪಾಲ್ಗೊಂಡಿದ್ದರು.

Leave a Comment