ಶೀಘ್ರ ಬಿಜೆಪಿ ಸರ್ಕಾರ ಬಿಎಸ್‌ವೈ ವಿಶ್ವಾಸ

= ಶೀಘ್ರ ಬಿಜೆಪಿ ಸರ್ಕಾರ ಬಿಎಸ್‌ವೈ ವಿಶ್ವಾಸ
ಹುಬ್ಬಳ್ಳಿ, ಮೇ 16-ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಪುನರುಚ್ಚರಿಸಿದ್ದಾರೆ.
ದೋಸ್ತಿ ಸರ್ಕಾರದ ಹಲವು ಅತೃಪ್ತ ಶಾಸಕರು ಈಗಾಗಲೇ ನಮ್ಮ ಜೊತೆ ಕೈಜೋಡಿಸಲು ಸಿದ್ಧವಿದ್ದಾರೆ, ನಾವು ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಹೇಳಿದರು.
ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು 104 ಶಾಸಕರು ಇದ್ದು ಚಿಂಚೋಳಿ, ಕುಂದಗೋಳ ಉಪಕದನದಲ್ಲಿ ನಮ್ಮ ಅಭ್ಯರ್ಥಿಗಳು 25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುವದರಿಂದ ನಮ್ಮ ಬಲ 106 ಕ್ಕೆ ಏರಲಿದೆ ಎಂದರು.
106 ಕ್ಕೆ ಪಕ್ಷೇತರ ಮೂವರು ಸಾತ್ ನೀಡುವದರಿಂದ ನಮ್ಮ ಸಂಖ್ಯೆ 109 ಮುಟ್ಟಲಿದೆ.ಸಂಖ್ಯೆ ಅಧಿಕಗೊಂಡರೆ ತನ್ನಿಂದ ತಾನೆ ಅಧಿಕಾರ ಕೈಗೆ ಬರುವುದು ಖಂಡಿತ ಎಂದು ಹೇಳಿದರು.
ಮೈತ್ರಿ ಸರ್ಕಾರದ  ಕೆಲವು ಅತೃಪ್ತ ಶಾಸಕರು ನಮ್ಮ ಒಡನಾಟದಲ್ಲಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

ನೈತಿಕ ಹಕ್ಕಿಲ್ಲ
ಮುಖ್ಯಮಂತ್ರಿ ಸ್ಥಾನದಿಂದ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ಕಾಂಗ್ರೆಸ್ಸಿಗೆ ಲಿಂಗಾಯತ ಮತ ಕೇಳುವ ನೈತಿಕತೆ ಇಲ್ಲ ಎಂದು ಅವರು ಹೇಳಿದರು.
ಲಿಂಗಾಯತ ವೀರಶೈವ ಸಮುದಾಯಕ್ಕೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಅರ್ಹತೆ ಕೂಡ ಇಲ್ಲ, 23ರ ನಂತರ ಆ ಪಕ್ಷಕ್ಕೆ ತಕ್ಕ ಪಾಠ ದೊರಕಲಿದೆ ಎಂದರು.
ಇನ್ನು ನನ್ನ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿದರೆ ತಾವು ದೊಡ್ಡವರಾಗುತ್ತೇವೆ ಎಂದು ತಿಳಿದಿದ್ದಾರೆ, ನನ್ನ ಬಗ್ಗೆ ಮಾತನಾಡಿ ಅವರು ದೊಡ್ಡವರಾಗಲಿ ಎಂದು ಯಡಿಯೂರಪ್ಪ ಗೇಲಿ ಮಾಡಿದರು.

Leave a Comment