ಶೀಘ್ರವೇ ಆಧಾರ್ – ವೋಟರ್ ಐಡಿ ಜೋಡಣೆ

ನವದೆಹಲಿ, ಫೆ. ೧೯- ಆಧಾರ್‌ಗೆ ಸಂಬಂಧಿಸಿದ ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸುವ ಮೂಲಕ ಚುನಾವಣಾ ಆಯೋಗವು ಬಹುಬೇಗನೆ ಆಧಾರ್ ಜೊತೆಗೆ ಮತದಾರರ ಗುರುತಿನ ಚೀಟಿಯನ್ನು ಜೋಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವುದು.
ಕೇಂದ್ರ ಸರ್ಕಾರದ ಈ ತೀರ್ಮಾನದ ಪರಿಣಾಮವಾಗಿ ಚುನಾವಣೆ ಆಯೋಗಕ್ಕೆ ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಯನ್ನು ಜೋಡಿಸುವ ಕಾರ್ಯಕ್ಕೆ ಕಾನೂನು ರೀತಿಯಲ್ಲಿ ಅವಕಾಶ ದೊರೆತಂತಾಗುವುದು.
ಖೊಟ್ವಿ, ನಕಲಿ, ಪ್ರತಿರೂಪ (ದ್ವಿಪ್ರತಿ) ಮತದಾರರ ಗುರುತಿನ ಚೀಟಿಗಳನ್ನು ತೊಡೆದು ಹಾಕಲು ಹಾಗೂ ದೂರದೂರಿನಲ್ಲಿ ಇರುವ ವಲಸಿಗರಿಗೆ ಮತದಾನದ ಅವಕಾಶ ಒದಗಿಸುವ ಪ್ರಯತ್ನಗಳು ಆಧಾರ್ – ಮತದಾರರ ಗುರುತಿನ ಚೀಟಿಗಳ ಜೋಡಣೆ ಹಿಂದಿನ ಉದ್ದೇಶ.
ಆದರೆ ಚುನಾವಣೆ ಆಯೋಗವು ಈ ರೀತಿ ಮಾಡುವುದಕ್ಕೆ ಅವಕಾಶ ದೊರೆಯಲು ಕೇಂದ್ರ ಸರ್ಕಾರವು ೧೯೫೧ರ ಜನತಾ ಪ್ರಾತಿನಿಧ್ಯ ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸಬೇಕು.
ಕಾಯಿದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಕೇಂದ್ರ ಸಚಿವ ಸಂಪುಟವು ಇನ್ನೂ ತೀರ್ಮಾನ ಕೈಗೊಳ್ಳಬೇಕಿದೆ. ಈ ವಿಷಯದ ಜೊತೆಜೊತೆಗೆ ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದಂತೆ, ಒಟ್ಟು ೪೦ಕ್ಕೂ ಹೆಚ್ಚು ವಿಷಯಗಳು ಇತ್ಯರ್ಥಕ್ಕಾಗಿ ಬಾಕಿ ಇವೆ ಎಂದು ಮುಖ್ಯ ಚುನಾವಣೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

Leave a Comment