ಶೀಘ್ರದಲ್ಲೇ ಮಧುಗಿರಿಗೆ ಹೇಮಾವತಿ ನೀರು: ಎಂವಿವಿ

ಮಧುಗಿರಿ, ಮೇ ೨೪- ಸರ್ಕಾರ ನೀರು ಬಿಡಲು ಒಪ್ಪಿದ್ದು, ಶೀಘ್ರದಲ್ಲಿಯೇ ಮಧುಗಿರಿಯ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಯಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ಪಟ್ಟಣದ ತಾ.ಪಂ.ನಲ್ಲಿ ನಡೆದ ಪಿಡಿಓಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎರಡನೇ ಅವಧಿಗೆ ಮಧುಗಿರಿಗೆ ಹೇಮೆ ಹರಿಯಲಿದ್ದು, ಪಟ್ಟಣದಲ್ಲಿ ನೀರಿನ ಸಮಸ್ಯೆ ದೂರಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ 50 ಖಾಸಗಿ ಕೊಳವೆ ಬಾವಿಯಿಂದ ನೀರು ಪಡೆದು ಜನರಿಗೆ ನೀಡುತ್ತಿದ್ದು, ತಹಶೀಲ್ದಾರ್ ಡಾ. ವಿಶ್ವನಾಥ್ ರವರು ಹಣ ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ಪಿಡಿಓಗಳು ಶಾಸಕರ ಗಮನಕ್ಕೆ ತಂದಾಗ,  ಕಷ್ಟದಲ್ಲಿ ಹಣ ಸಿಗಲಿದೆ ಎಂಬ ಕಾರಣಕ್ಕೆ ರೈತರು ಸರ್ಕಾರಕ್ಕೆ ನೀರು ಕೊಡುತ್ತಾರೆ. ನೀವು ಹಣ ಬಿಡುಗಡೆ ಮಾಡದಿದ್ದರೆ ಪಿಡಿಓಗಳು ಏನು ಮಾಡಬೇಕು. ಇದರಿಂದ ಸರ್ಕಾರಕ್ಕೂ ನಮಗೂ ಕೆಟ್ಟ ಹೆಸರು ಬರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ, ಕೆಲ ಗ್ರಾ.ಪಂ. ಗಳು ಹಿಂದಿನ ವರ್ಷ ನೀರು ಪೂರೈಕೆಯಾದ ಬಿಲ್ಲುಗಳನ್ನು ಈ ವರ್ಷವೂ ಸಹ ನೀಡಿದ್ದು, ಇದರ ಬಗ್ಗೆ ಪರಿಶೀಲಿಸಿ ಹಣ ಬಿಡುಗಡೆ ಮಾಡಬೇಕಿದೆ ಎಂದು ತಹಶೀಲ್ದಾರ್ ಶಾಸಕರ ಗಮನಕ್ಕೆ ತಂದರು.
ಶಾಸಕರು ಸಭೆಯಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲೇ ಮಾತನಾಡಿ, ಹಣ ಬಿಡುಗಡೆಗೆ ಒಪ್ಪಿಗೆ ಪಡೆದು ಅಂತಹ ಬಿಲ್ಲುಗಳನ್ನು ಹೊರತುಪಡಿಸಿ ಈ ವರ್ಷ ನೀರು ಪೂರೈಕೆ ಮಾಡಿದ ಬಿಲ್ಲುಗಳನ್ನು ಮಂಜೂರು ಮಾಡಿ ಎಂದು ತಹಶೀಲ್ದಾರ್‍ಗೆ ಸೂಚಿಸಿದರು.

ನರೇಗಾದಲ್ಲಿ ಮಧುಗಿರಿ ಪ್ರಥಮ ಸ್ಥಾನದಲ್ಲಿದ್ದು, ಕೂಲಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗ 40 ಸಾವಿರ ಹಣ ಬಿಡುಗಡೆಯಾಗಿದ್ದು, ಪಿಡಿಓಗಳು ಕಷ್ಟದಲ್ಲಿರುವ ರೈತರು, ಬಡವರಿಗೆ ಇದರಿಂದ ನೆರವಾಗಬೇಕು. ನಿಮ್ಮ ಯಾವುದೇ ಸಮಸ್ಯೆಗಳಿಗೆ ನಾನು ಜತೆಗಿರಲಿದ್ದು, ಯಾರೊಂದಿಗೂ ರಾಜಕೀಯ ಮಾಡಬೇಡಿ. ಸ್ಥಳೀಯ ನಾಯಕರ ಹಾಗೂ ರೈತರ, ಬಡವರನ್ನು ನಮ್ಮವರಂತೆ ಕಾಣಬೇಕು. 15ನೇ ಹಣಕಾಸು ಯೋಜನೆಯಲ್ಲಿ ಗ್ರಾಮೀಣಾಭಿವೃದ್ಧಿಗೆ ಶೇ.50 ರಷ್ಟು ಹಣ ಮೀಸಲಿಟ್ಟಿದ್ದು, ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಜನಪರ ಕೆಲಸ ಮಾಡಬೇಕು ಎಂದರು.

45 ಹಳ್ಳಿಗಳಲ್ಲಿ ಕೊಳವೆ ಬಾವಿ ವಿಫಲವಾಗಿದ್ದು, ಟ್ಯಾಂಕರ್ ಮೂಲಕ ನೀರು ನೀಡುತ್ತಿದ್ದೇವೆ. ಮತ್ತಷ್ಟೂ ಕೊಳವೆ ಬಾವಿಗೆ ಅನುಮತಿ ಪಡೆದು ಕೆಲಸ ಮಾಡುವುದಾಗಿ ತಾ.ಪಂ.ಇಓ ದೊಡ್ಡಸಿದ್ದಯ್ಯ ತಿಳಿಸಿದರು.
ಸಭೆಯಲ್ಲಿ ಬೆಸ್ಕಾಂ ಎಇಇ ಕೃಷ್ಣಮೂರ್ತಿ ಸೇರಿದಂತೆ ಎಲ್ಲಾ ಗ್ರಾ.ಪಂ ಪಿಡಿಓಗಳು ಪಾಲ್ಗೊಂಡಿದ್ದರು.

Share

Leave a Comment