ಶೀಘ್ರದಲ್ಲೆ ಕಿರುರಂಗಮಂದಿರ ಲೋಕಾರ್ಪಣೆ – ಡಿಸಿ

ಮೈಸೂರು, ಜೂ.19- ಮೈಸೂರು ಕಲಾಮಂದಿರದ ಆವರಣದಲ್ಲಿ ನಿರ್ಮಿಸುತ್ತಿರುವ ಕಿರು ರಂಗಮಂದಿರಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಸೂರಿನ ಜನತೆಯ ಬಹುದಿನದ ಬೇಡಿಕೆಯಾದ ಕಿರುರಂಗಮಂದಿರದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಜಿಲ್ಲಾಧಿಕಾರಿ ಡಿ.ರಂದೀಪ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು ಎರಡುಕೋಟಿ ಹದಿನಾರು ಲಕ್ಷರೂ ವೆಚ್ಚದಲ್ಲಿ ನಿರ್ಮಾಣವಾದ ಈ ಕಿರುರಂಗಮಂದಿರವನ್ನು ಸದ್ಯದಲ್ಲಿಯೇ ಲೋಕಾರ್ಪಣೆಗೊಳಿಸಲಿದ್ದೇವೆ. ಜೂ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿಗೆ ಬರಲಿದ್ದಾರೆ. ಅವರ ಕಚೇರಿಯನ್ನು ಸಂಪರ್ಕಿಸಿ ಅವರಿಗೆ ಆ ದಿನ ಬಿಡುವು ದೊರೆತರೆ ಅಂದೇ ಉದ್ಘಾಟಿಸಲಾಗುವುದು ಎಂದು ತಿಳಿಸಿದರು. ಬಹಳ ದಿನಗಳಿಂದ ಮೈಸೂರಿನ ಜನರಲ್ಲಿ ಹಾಗೂ ಕಲಾವಿದರಲ್ಲಿ ಕಿರುರಂಗಮಂದಿರ ಬೇಗ ಉದ್ಘಾಟನೆಯಾಗಬೇಕು,ಬಳಸಬೇಕು ಎಂಬುದಿತ್ತು. ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಿಸಲಾದ ಈ ರಂಗಮಂದಿರದ ಶೇ.99ರಷ್ಟು ಕಾಮಗಾರಿ ಈಗಾಗಲೇ ಮುಗಿದಿದೆ. ಇನ್ನು ಸಣ್ಣಪುಟ್ಟ ಕಾಮಗಾರಿಗಳನ್ನು ಇನ್ನೆರಡು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಕಿರು ರಂಗಮಂದಿರದಲ್ಲಿ 200 ಮಂದಿ ಕುಳಿತು ವೀಕ್ಷಿಸಲು ಅನುಕೂಲವಾಗುವಂತೆ 200 ಆಸನಗಳನ್ನು ಅಳವಡಿಸಲಾಗಿದೆ.
@12bc = ಖುದ್ದು ಪರಿಶೀಲಿಸಿದ ಜಿಲ್ಲಾಧಿಕಾರಿ
ಕೆಲವು ಅಧಿಕಾರಿಗಳು ಕಾಮಗಾರಿ ನಡೆಯುತ್ತಿದೆಯಾ? ಮುಗಿಯಿತಾ ಎಂದು ದೂರದಲ್ಲಿಯೇ ನಿಂತು ಸಂಬಂಧಪಟ್ಟವರಿಗೆ ಸೂಚನೆ ನೀಡಿ ಹೊರಡು ಹೋಗುತ್ತಾರೆ. ಆದರೆ ಜಿಲ್ಲಾಧಿಕಾರಿ ಡಿ.ರಂದೀಪ್ ವಿಶಿಷ್ಟತೆಯನ್ನು ಮೆರೆದಿದ್ದಾರೆ. ತಾವೇ ಖುದ್ದು ಕಿರುರಂಗಮಂದಿರಲ್ಲಿ ಅಳವಡಿಸಲಾದ ಆಸನಗಳಲ್ಲಿ ಕುಳಿತು ಪರಿಶೀಲಿಸಿದರು. ಕುಳಿತಾಗ ಅವರಿಗೆ ಇರಿಸುಮುರುಸಿನ ಅನುಭವವಾಯಿತೇನೋ, ತಕ್ಷಣ ಅಲ್ಲೇ ಇದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಚೆನ್ನಪ್ಪನವರನ್ನು ಕರೆದು ಇದೇನ್ರೀ, ಇದರಲ್ಲಿ ಕುಳಿತವರು ಆರಾಮವಾಗಿ ಕೈ ಇಟ್ಟು ಕುಳಿತುಕೊಳ್ಳಲು ಸಾಧ್ಯವಿಲ್ಲ. ಸ್ವಲ್ಪ ಅಂತರ ಇರಿಸಬೇಕಿತ್ತಲ್ರೀ ಎಂದರು. ಅದಕ್ಕುತ್ತರಿಸಿದ ಚೆನ್ನಪ್ಪ,ಅಂತರವಿರಿಸಿದರೆ 200 ಆಸನ ಜೋಡಿಸಲು ಸಾಧ್ಯವಿಲ್ಲ. ಸ್ಥಳ ಕಡಿಮೆಯಾಗುತ್ತದೆ ಎಂದಾಗ ನೋಡಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಬೇಕು ಎಂದು ತಿಳಿಸಿದರು. ಇತರ ಅಧಿಕಾರಿಗಳು, ಸಮಾಜಸೇವಕ ಗೋಪಿನಾಥ್ ಜಿಲ್ಲಾಧಿಕಾರಿಗಳ ಜೊತೆಗಿದ್ದರು.

Leave a Comment