ಶಿಸ್ತು ಉಲ್ಲಂಘಿಸಿದರೆ ಸಮಸ್ಯೆಯೇ ಹೆಚ್ಚು: ಎಸಿ

ಪುತ್ತೂರು, ಸೆ.೨- ವಾಹನ ಪಾರ್ಕಿಂಗ್, ವಾಹನ ನಿರ್ವಹಣೆ ಮತ್ತು ತ್ಯಾಜ್ಯ ವಿಲೇವಾರಿ ಈ ಮೂರು ಪುತ್ತೂರು ನಗರದ ಬಹುದೊಡ್ಡ ಸಮಸ್ಯೆಯಾಗಿದ್ದು, ವಾಹನ ಚಲಾವಣೆ ಮಾಡುವಾಗ ಸವಾರರು ಶಿಸ್ತಿನಿಂದ ವರ್ತಿಸಬೇಕು. ಶಿಸ್ತು ಉಲ್ಲಂಘನೆ ಮಾಡಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.

ಪುತ್ತೂರು ನಗರದ ದರ್ಬೆ ಪ್ರವಾಸಿ ಮಂದಿರದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಗೂಡ್ಸ್ ಪಾರ್ಕಿಂಗ್ ತಂಗುದಾಣವನ್ನು ಅವರು ನಿನ್ನೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ವರ್ತಕ ಸಂಘದವರು ಹಾಗೂ ಗೂಡ್ಸ್ ವಾಹನ ಚಾಲಕ ಮಾಲಕರು ನನ್ನ ಬಳಿಗೆ ಬಂದು ಗೂಡ್ಸ್ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು. ಈ ವಿಚಾರವನ್ನು ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರ ಗಮನಕ್ಕೆ ತಂದಿದ್ದೆ.  ವಾಹನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರಕಂಡುಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಮತ್ತು ಪೊಲೀಸ್ ಇಲಾಖೆಯಿಂದ ಹೊಸ ಪ್ರಯೋಗ ಮಾಡಲಾಗುತ್ತಿದ್ದು, ಇದರ ಒಂದು ಭಾಗವಾಗಿ ಇಂದು ಗೂಡ್ಸ್ ವಾಹನಗಳ ಪಾರ್ಕಿಂಗ್ ತಂಗುದಾಣ ವ್ಯವಸ್ಥೆ ಮಾಡಲಾಗಿದೆ ಎಂದರು.

ಸುಂದರ ಪುತ್ತೂರು ನಿರ್ಮಾಣ ಮಾಡಬೇಕೆಂದು ಕೇವಲ ಬಾಯಿ ಮಾತಿನಲ್ಲಿ ಹೇಳುವುದಲ್ಲ. ಅದನ್ನು ಕಾರ್ಯರೂಪಕ್ಕೆ ತರುವುದು ಮುಖ್ಯ. ಸ್ವಚ್ಛತೆ ಕುರಿತು ಆಡಳಿತ ವರ್ಗ ಕಾರ್ಯಕ್ರಮ ಕೈಗೊಳ್ಳುತ್ತಿದ್ದು, ಅದಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ  ಎಂದು  ಅವರು ತಿಳಿಸಿದರು.

ದೀಪ ಪ್ರಜ್ವಲಿಸಿದ ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಮತ್ತು ಪುತ್ತೂರು ನಗರಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರು ಮಾತನಾಡಿದರು.

ಪುತ್ತೂರು ಗೂಡ್ಸ್ ವಾಹನ ಚಾಲಕ ಮಾಲಕರ ಸಂಘದ ಗೌರವ ಸಲಹೆಗಾರರಾದ ವಕೀಲೆ ಶೈಲಜಾ ಅಮರನಾಥ್ ಇದ್ದರು.  ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ಸುರೇಂದ್ರ ಕಿಣಿ ಪ್ರಸ್ತಾವನೆಗೈದರು. ಪುತ್ತೂರು ರೋಟರಿ ಸಿಟಿ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿದರು. ಪುತ್ತೂರು ಗೂಡ್ಸ್ ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ಹರೀಶ್ ನಾಯಕ್ ವಂದಿಸಿದರು. ನೇಮಾಕ್ಷ ಸುವರ್ಣ ನಿರೂಪಿಸಿದರು.

Leave a Comment