ಶಿವ ಶಕ್ತಿಯರಿಗೆ ನೃತ್ಯಾರಾಧನೆ

ಕಳೆದ ಏಪ್ರಿಲ್ ೨೦ರ  ಶನಿವಾರ ಸಂಜೆ  ರವೀಂದ್ರ ಕಲಾಕ್ಷೇತ್ರದಲ್ಲಿ ಕುಮಾರಿ ಪೂರ್ವಿ ವಿ ಭಟ್ ಅವರ ಭರತನಾಟ್ಯ ರಂಗಾರೋಹಣವು ಲಾಸ್ಯವರ್ಧನ ಟ್ರಸ್ಟ್‌ನ ಗುರು ಡಾ. ಮಾಲಿನಿ ರವಿಶಂಕರ್ ಅವರ ಪರಿಕಲ್ಪನೆಯಲ್ಲಿ ಯಶಸ್ವಿಯಾಗಿ ಮೂಡಿಬಂದಿತು.

ಭರತನಾಟ್ಯ ರಂಗಾರೋಹಣದ ಪರಿಕಲ್ಪನೆ ಹಾಗೂ ನೃತ್ಯ ಸಂಯೋಜನೆ ಗುರು ಡಾ. ಮಾಲಿನಿ ರವಿಶಂಕರ್ ಅವರ ಸೃಜನಶೀಲತೆಗೆ ಹಿಡಿದ ಕನ್ನಡಿಯಂತ್ತಿತ್ತು. ನೃತ್ಯ ಸಂಗೀತಕ್ಕೆ ರಾಗ ಸಂಯೋಜನೆ ಮಾಡಿ ತಮ್ಮ ಕಂಠಸಿರಿಯನ್ನು ನೀಡಿದ ವಿದ್ವಾನ್ ಬಾಲಸುಬ್ರಹ್ಮಣ ಶರ್ಮಾ ಅವರದ್ದೂ ಯಶಸ್ಸಿನಲ್ಲಿ ಪಾಲು ಇತ್ತು. ಕಾರ್ಯಕ್ರಮಕ್ಕೆ ಪೂರಕವಾಗುವಂತೆ ಶಿವ ಹಾಗೂ ನಂದಿ ವಿಗ್ರಹ ಹಾಗೂ ಸುಂದರ ಕೆತ್ತನೆಯ ಕಂಬಗಳನ್ನು ಹೊಂದಿದ ರಂಗಸಜ್ಜಿಕೆ, ಬೆಳಕು ಅತ್ಯುತ್ತಮವಾಗಿತ್ತು. ಪಾಂಡಿತ್ಯ ಹೊಂದಿದ ವಾದ್ಯ ವಿದ್ವಾಂಸರ ತಂಡವೂ ಇದಕ್ಕೆ ಮೆರುಗು ನೀಡಿತು.

23vaividya2ಪುಷ್ಪಾಂಜಲಿಯಲ್ಲಿ ಆದಿ ಪೂಜಿತ, ವಿಘ್ನನಿವಾರಕ ಗಣನಾಯಕನನ್ನು ಆರಾಧಿಸುವ ಶ್ಲೋಕದೊಂದಿಗೆ  ಆದಿಶಂಕರಾಚಾರ್ಯ ವಿರಚಿತ ಶಿವ ಪಂಚಾಕ್ಷರಿ ಸ್ತೋತ್ರದಿಂದ ಆರಂಭಗೊಂಡ “ಶಿವಶಕ್ತಿ”ಯಲ್ಲಿ ಕಲಾವಿದೆಯು ಹಸ್ತಗಳ ನಿಖರತೆ ತೋರಿದರು, ಆಕೆಯ ಭಕ್ತಿ ಭಾವ ಎಲ್ಲರ ಮನಸ್ಸು ಸೆಳೆಯಿತು.ಆಭೋಗಿ ರಾಗದಲ್ಲಿದ್ದ ಜತಿಸ್ವರವು ಅನೇಕ ಸ್ವರ ಮತ್ತು ಜತಿಗಳನ್ನು ಹೊಂದಿದ್ದು ಅನೇಕ ಕೋರ್ವೆಗಳಿಂದ ಸುಂದರವಾಗಿ ಮೂಡಿಬಂದಿತು. ಈ ನೃತ್ತಬಂಧದಲ್ಲಿ ಕಲಾವಿದೆಯ ಲಯ ಜ್ಞಾನ ಹಾಗೂ ಅಡವು ಶುದ್ಧತೆ ಎದ್ದು ಕಂಡಿತು. ಕಲಾವಿದೆಯು ಪ್ರಬುದ್ಧವಾಗಿ ಜತಿ ಹಾಗೂ ಕೋರ್ವೆಗಳನ್ನು ಪ್ರದರ್ಶಿಸಿದಳು.

ಶಂಕರ ಪರಮೇಶ್ವರ ಎಂಬ ಶಬ್ಧಂನಲ್ಲಿ ತನ್ನ ಇಷ್ಟದೇವತೆಯಾದ ಶಿವನನ್ನು ಕೊಂಡಾಡಿದ ನಾಯಿಕೆಯಾಗಿ ನೃತ್ಯ ಪ್ರಸ್ತುತಪಡಿಸಿದ ಪೂರ್ವಿಯ ಅಭಿನಯ ಪ್ರೌಢಿಮೆ ಇಲ್ಲಿ ಅನಾವರಣಗೊಂಡಿತು. ಕರುಣಾಮಯಿಯಾದ ನೀನು ನನ್ನ ಮೇಲೆ  ಕೂಡಾ ಕರುಣೆ ತೋರು ಎಂದು ಶಿವನನ್ನು ಬೇಡುವ ನಾಯಿಕೆಯ ತೊಳಲಾಟವನ್ನು ಕಲಾವಿದೆಯು ಅಚ್ಚು ಕಟ್ಟಾಗಿ ಪ್ರದರ್ಶಿಸಿದಳು.

ತನ್ನ ಸಖಿಯನ್ನು ಕುರಿತು ಶಿವನನ್ನು ಕರೆತರಲು ಹೇಳುವ ವಿರಹೋತ್ಕಂಟಿತೆ ನಾಯಕಿಯ ಚಿತ್ರಣವಿರುವ ವರ್ಣದಲ್ಲಿ ಕಲಾವಿದೆಯು ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದು ಮನಸ್ಸಿಗೆ ಮುದ ನೀಡಿತು.  ಎಲ್ಲೆಲ್ಲಿಯೂ ಶಿವನನ್ನು ಕಾಣುವ ನಾಯಕಿಯು ಆತ ಬಾರದೆ ನೊಂದ ಕ್ಷಣಗಳು, ರತಿ ಮನ್ಮಥರ ಕಥೆ ಹಾಗೂ ಸಮುದ್ರ ಮಂಥನದ ದೃಶ್ಯಗಳು ಸಂಚಾರಿಗಳ ರೂಪದಲ್ಲಿ ಮೂಡಿಬಂದವು. ಜತಿಗಳಲ್ಲಿ ಮೂಡಿಬಂಧ ಸ್ಥಿರ ಅಡವುಗಳು, ಭೂಮಿ ಹಾಗೂ ಆಕಾಶ ಚಾರಿಗಳನ್ನು ಕಲಾವಿದೆಯು ಅತ್ಯಂತ ಸುಂದರವಾಗಿ  ಅಭಿವ್ಯಕ್ತಿಸಿದಳು.

ಅರ್ಧನಾರೀಶ್ವರನ ದಿವ್ಯ ರೂಪವನ್ನು ಅನಾವರಣ ಮಾಡಿದ ನೃತ್ಯದಲ್ಲಿ ಪೂರ್ವಿಯವರ ಆಹಾರ್ಯ ಅತೀ ಸೂಕ್ತವಾಗಿದ್ದು ಗಮನ ಸೆಳೆಯಿತು. ಬಲದಲ್ಲಿ ಹುಲಿಯ ಚರ್ಮ, ರುದ್ರಾಕ್ಷಿ ಮಾಲೆ ಹಾಗೂ ಚಂದ್ರ, ಎಡದಲ್ಲಿ ಮುತ್ತಿನ ಹಾರ ಬಳೆಗಳು ಶಿವ-ಶಿವೆಯರನ್ನು ಬಿಂಬಿಸಿತು. ಶಿವ-ಶಕ್ತಿಯರು ಒಟ್ಟಿಗೆ  ನೃತ್ಯ ಮಾಡುವ ಮನಮೋಹಕ ದೃಶ್ಯಗಳಲ್ಲಿ ಶಿವನ ಆರ್ಭಟಕರವಾದ ತಾಂಡವ ಹಾಗೂ ಪಾರ್ವತಿಯ ಲಾಸ್ಯಭರಿತ ನೃತ್ಯಗಳನ್ನು ಪೂರ್ವಿ ಆಕರ್ಷಕವಾಗಿ ಕಟ್ಟಿಕೊಟ್ಟಳು.  ಗುರು ಮಾಲಿನಿ ರವಿಶಂಕರ್ ಅವರ ನೃತ್ಯ ಸಂಯೋಜನೆ ಅಧ್ಬುತವಾಗಿತ್ತು.  ಆಕಾಶ ಚಾರಿಗಳು ಹಾಗೂ ಕರಣಗಳ ಪ್ರಸ್ತುತಿ ಸೊಗಸಾಗಿತ್ತು.

ದೇವಿಸ್ತುತಿಯಲ್ಲಿ ಶಿವ ವಿಷ್ಣುವಿನ ನಡುವಿನ ಕಲಹವನ್ನು ತಡೆಯಲು ಹೋದ ಪಾರ್ವತಿಯು ಅವರಿಬ್ಬರನ್ನೂ ನಾಗ ರೂಪ ಪಡೆಯುವಂತೆ ಮಾಡಿ ಶಾಂತದುರ್ಗೆಯ ಅವತಾರವನ್ನು ಮನಮೋಹಕ ಸಂಚಾರಿಯನ್ನು ಕಲಾವಿದೆಯು ಪ್ರಭಾವಶಾಲಿ ಅಭಿನಯದೊಂದಿಗೆ ಪ್ರದರ್ಶಿಸಿದಳು.

ದ್ವಾರಕಿ ಕೃಷ್ಣಮೂರ್ತಿಯವರು ರಚಿಸಿದ ತಿಲ್ಲಾನದಲ್ಲಿ ನವವಿನ್ಯಾಸದ ನೃತ್ತಗಳು, ಅರ್ಧಿ, ಭ್ರಮರಿಗಳಿಂದ ಕೂಡಿದ್ದು, ಉತ್ಸಾಹದಿಂದ ನರ್ತಿಸಿದ ಪೂರ್ವಿಯು ಸಂವಿತ್ ಸಂಕೀರ್ತನ ಸಾರ ಎಂಬ ಪುಸ್ತಕದಿಂದ ಆಯ್ದ ಮಂಗಳಂನೊಂದಿಗೆ ತನ್ನ  ರಂಗಾರೋಹಣ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.

 

Leave a Comment