‘ಶಿವ ಭಕ್ತ’ ರಾಹುಲ್ ಕೈಲಾಸ ಯಾತ್ರೆಗೆ ಸಿದ್ಧತೆ

ನವದೆಹಲಿ, ಆ. ೨೯: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಮಾಸಾಂತ್ಯಕ್ಕೆ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಸಾಧ್ಯತೆಗಳಿವೆ.
ಸಾಮಾನ್ಯವಾಗಿ ಶಿವ ಭಕ್ತರು ಕೈಗೊಳ್ಳುವ ಯಾತ್ರೆ ಇದಾಗಿದ್ದು, ತಾವೂ ಸಹ ‘ಓರ್ವ ಶಿವ ಭಕ್ತ’ ಎಂದು ರಾಹುಲ್ ಹೇಳಿಕೊಂಡಿದ್ದರು. ಏಪ್ರಿಲ್‌ನಲ್ಲಿ ರಾಮ್‌ಲೀಲಾ ಮೈದಾನದಲ್ಲಿ ನಡೆದ ‘ಜನ ಆಕ್ರೋಶ’ ರ್‍ಯಾಲಿಯಲ್ಲಿ ಮಾತನಾಡುವಾಗ ‘ನಾನೂ ಸಹ ಶಿವ ಭಕ್ತ’ ಎಂಬ ಹೇಳಿಕೆಯನ್ನು ಅವರು ನೀಡಿದ್ದರು.
ಕರ್ನಾಟಕದಲ್ಲಿ ನಡೆದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೂದಲೆಳೆ ಅಂತರದಲ್ಲಿ ಅವರು ವಿಮಾನಾಪಘಾತದಿಂದ ಪಾರಾದ ಬಳಿಕ ರಾಹುಲ್ ಶಿವನಿಗೆ ತಮ್ಮ ಧನ್ಯವಾದ ಅರ್ಪಿಸುವ ಸಲುವಾಗಿ ತಾವು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ನಿರ್ಧಾರ ಪ್ರಕಟಿಸಿದ್ದರು.
ಮಾನಸ ಸರೋವರಕ್ಕೆ ಚೀನಾ ದಾಟಿ ಹೋಗಬೇಕಾಗಿರುವುದರಿಂದ ಯಾತ್ರಾರ್ಥಿಗಳು ಮುಂಚಿತವಾಗಿಯೇ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು; ಸೆಪ್ಟೆಂಬರ್ ೮ಕ್ಕೆ ಈ ವರ್ಷದ ಯಾತ್ರೆ ಮುಗಿಯಲಿದೆ. ಆದರೆ ಈವರೆಗೂ ರಾಹುಲ್ ಗಾಂಧಿ ತಮ್ಮ ಯಾತ್ರೆಯನ್ನು ನೊಂದಾಯಿಸಿಲ್ಲ ಎಂದು ಸಂಬಂಧಪಟ್ಟ ಎಂ.ಇ.ಎ. ಮೂಲಗಳು ಸ್ಪಷ್ಟಪಡಿಸಿವೆ. ಆದರೂ ಮೂಲಗಳ ಪ್ರಕಾರ ರಾಹುಲ್ ಯಾತ್ರೆ ಕೈಗೊಳ್ಳುವ ಸಾಧ್ಯತೆಗಳಿವೆ. ಖಾಸಗಿ ಪ್ರವಾಸಿ ಏಜೆನ್ಸಿಯೇ ಆದರೂ ಈ ಯಾತ್ರೆಗೆ ವಿಶೇಷ ಅನುಮತಿ ಪಡೆದುಕೊಳ್ಳುವ ಅವಕಾಶವೂ ಇದೆ.
ಹಿಂದುತ್ವದ ಬಗ್ಗೆ ತಾವು ಮೃದು ಧೋರಣೆ ಹೊಂದಿರುವುದನ್ನು ತೋರ್ಪಡಿಸುವ ಸಲುವಾಗಿ ರಾಹುಲ್ ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದು, ಅವುಗಳಲ್ಲಿ ಈ ಯಾತ್ರೆಯೂ ಒಂದಾಗಿದೆ. ಈ ಹಿಂದೆ ಗುಜರಾತ್ ಹಾಗೂ ಕರ್ನಾಟಕದಲ್ಲಿನ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ ಅಧ್ಯಕ್ಷರು ಈ ಎರಡೂ ರಾಜ್ಯಗಳ ಅನೇಕ ದೇವಾಲಯಗಳಿಗೆ ಭೇಟಿ ನೀಡಿದ್ದರು. ಒಮ್ಮೆಯಂತೂ ರಾಹುಲ್ ರುದ್ರಾಕ್ಷಿಯನ್ನೂ ಧರಿಸಿದ್ದರು. ರಾಹುಲ್ ಹಾಗೂ ಅವರ ಕುಟುಂಬದವರು ‘ಜನಿವಾರ’ ಧರಿಸಿದ್ದಾರೆ ಎಂದೂ ಪಕ್ಷದ ಮೂಲಗಳು ಪಿಸುಗುಟ್ಟಿದ್ದವು!
೨೦೧೪ರ ಚುನಾವಣೆಗಳಲ್ಲಿ ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರನ್ನು ಓಲೈಸುವ ಧೋರಣೆ ಹೊಂದಿದ್ದರಿಂದಲೇ ಪರಾಭವಗೊಂಡಿತು ಎಂಬ ‘ಆತ್ಮಾವಲೋಕನ’ ಮೂಡಿಬಂದ ಬಳಿಕ ಎಚ್ಚೆತ್ತುಕೊಂಡು ಇದೀಗ ಮುಂಬರುವ ಚುನಾವಣೆಯಲ್ಲಿ ಹಿಂದುತ್ವದ ಕುರಿತು ಮೃದು ಧೋರಣೆ ವ್ಯಕ್ತಪಡಿಸಲಾಗುತ್ತಿದೆ.
೨೦೧೫ ರಲ್ಲಿ ಉತ್ತರಕಾಂಡದಲ್ಲಿನ ಪ್ರವಾಹ ಪರಿಸ್ಥಿತಿಯಲ್ಲೂ ರಾಹುಲ್ ಕೇದಾರನಾಥ ಯಾತ್ರೆ ಮಾಡುವ ಮೂಲಕ ತಾವು ಹಿಂದುತ್ವ ವಿರೋಧಿಯಲ್ಲ ಎಂಬುದನ್ನು ಸಾರಿದ್ದರು.

Leave a Comment