ಶಿವರಾತ್ರಿ ಸಂಭ್ರಮ- ಮುಂಜಾನೆಯಿಂದಲೇ ದೇಗುಲಗಳಲ್ಲಿ ಭಕ್ತ ಸಾಗರ

ವಿಜಯಪುರ,ಫೆ.13- ಗುಮ್ಮಟಿ ನಗರ ವಿಜಯಪುರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಮಂಗಳವಾರ ಮಹಾ ಶಿವರಾತ್ರಿ ಸಂಭ್ರಮ. ಮುಂಜಾನೆಯಿಂದಲೇ ಶಿವ ದೇವಾಲಯಗಳು ಸೇರಿದಂತೆ ಬಹುತೇಕ ದೇಗುಲಗಳಲ್ಲಿ ಭಕ್ತ ಸಾಗರವೇ ನೆರೆದಿತ್ತು…

ನಸುಕಿನಿಂದಲೇ ಉಪವಾಸ ವ್ರತ ಕೈಗೊಂಡ ಸಹಸ್ರ, ಸಹಸ್ರ ಸಂಖ್ಯೆಯ ಶಿವ ಭಕ್ತರು ಸನಿಹದ ದೇಗುಲಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇನ್ನೂ ಕೆಲವರು ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮಕ್ಕೆ ತೆರಳಿ ಸಂಗಮನಾಥನ ದರ್ಶನ ಪಡೆದು ಧನ್ಯತಾಭಾವ ಹೊಂದಿದರು. ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಹಬ್ಬ ಆಚರಿಸಿದರು.

ಎಳೆನೀರು, ಹಾಲು, ಮೊಸರು, ಹೂವು–ಹಣ್ಣಿಗೆ ಬೇಡಿಕೆ ಹೆಚ್ಚಿತ್ತು. ದೇಗುಲಗಳು ಸೇರಿದಂತೆ ಮನೆ ಮನೆಗಳಲ್ಲೂ ಶಿವನ ಮೂರ್ತಿಗೆ, ಲಿಂಗಕ್ಕೆ ಅಭಿಷೇಕ ಮಾಡಲು ಇವು ಅಗತ್ಯವಿದ್ದುದರಿಂದ ದರವೂ ದುಬಾರಿಯಾಗಿದ್ದವು. ನಗರವೂ ಸೇರಿದಂತೆ ಜಿಲ್ಲೆ, ಹೊರ ಜಿಲ್ಲೆಯ ಸಹಸ್ರ, ಸಹಸ್ರ ಭಕ್ತರು ಮಂಗಳವಾರ ವಿಜಯಪುರದ ಶಿವಗಿರಿಯಲ್ಲಿರುವ ದೇಶದ ಎರಡನೇ ಅತಿ ಎತ್ತರದ ಶಿವನ ಮೂರ್ತಿ ಸೇರಿದಂತೆ ಹಲವು ಕಡೆ ಇರುವ ಶಿವನ ದೇಗುಲಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಮುಸ್ಸಂಜೆಯಾದರೂ ಪಾಳಿ ಹಚ್ಚಿ ಶಿವನ ದರ್ಶನ ಪಡೆದು ಪುನೀತರಾದರು..ವಿಜಯಪುರ ಹೊರ ವಲಯದ ಶಿವಗಿರಿಯಲ್ಲಿರುವ ಬೃಹತ್ ಶಿವನ ಮೂರ್ತಿ ಸನ್ನಿಧಿಯಲ್ಲಿರುವ ಕಾಶಿ ವಿಶ್ವನಾಥನಿಗೆ ರುದ್ರಾಭಿಷೇಕ, ಶಿವಭಜನೆ ಸೇರಿದಂತೆ ಇಡೀ ದಿನ ವಿಶೇಷ ಪೂಜೆ ನೆರವೇರಿದವು. ಅಪಾರ ಭಕ್ತರು ಮುಂಜಾನೆಯಿಂದಲೇ ಶಿವಗಿರಿಯತ್ತ ತೆರಳಿ ಗಂಟಲೆಗಟ್ಟಲೆ ಸರತಿಯಲ್ಲಿ ನಿಂತು ಶಂಕರನ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಶಿವಗಿರಿಗೆ ಸಾರಿಗೆ ಸಂಸ್ಥೆ ಹೆಚ್ಚಿನ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿತ್ತು. ಮಧ್ಯಾಹ್ನ ಸಿದ್ಧೇಶ್ವರ ಗುಡಿಯಿಂದ ಶಿವಗಿರಿ ತನಕ ನಂದಿಧ್ವಜಗಳ ಮೆರವಣಿಗೆ ಜನಪದ ಕಲಾತಂಡಗಳೊಂದಿಗೆ ಜರುಗಿತು. ಶಿಖಾರಖಾನೆ ಪ್ರದೇಶದಲ್ಲಿರುವ ಐತಿಹಾಸಿಕ ಸುಂದರೇಶ್ವರ ದೇಗುಲದಲ್ಲೂ ಅಪಾರ ಭಕ್ತರು ಪಾಳಿ ಹಚ್ಚಿ ದೇವರ ದರ್ಶನ ಪಡೆದರು. ತಲೆ ಮೇಲೆ ಶ್ರೀಚಕ್ರ ಹೊಂದಿರುವ ದೇಶದ ವಿರಳ ದೇಗುಲ ನಗರದಲ್ಲಿರುವುದು ವಿಶೇಷ. ಹೀಗಾಗಿ ಸುಂದರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲು ಹೆಚ್ಚಿನ ಭಕ್ತರು ಬಂದಿದ್ದರು. ಲಿಂಗದಗುಡಿ ರಸ್ತೆಯಲ್ಲಿರುವ 770 ಲಿಂಗಗಳ ದೇವಾಲಯ ದಲ್ಲೂ ಶಿವರಾತ್ರಿ ವಿಶೇಷ ಪೂಜೆ ನೆರವೇರಿತು. ಮಹಿಳೆಯರು, ಮಕ್ಕಳು ಸೇರಿದಂತೆ ಹೆಚ್ಚಿನ ಭಕ್ತರು ಆಗಮಿಸಿ ದರ್ಶನ ಪಡೆದು ಪ್ರಾರ್ಥಿಸಿದರು. ಒಂದೇ ಕಡೆ 770 ಲಿಂಗಗಳ ದರ್ಶನ ಪಡೆದ ಪುನೀತ ಭಾವ ಭಕ್ತರಲ್ಲಿತ್ತು. ನಗರದ ಹೊರವಲಯದ ದರ್ಗಾ ಪ್ರದೇಶದಲ್ಲಿರುವ ಐತಿಹಾಸಿಕ ಅಡವಿ ಶಂಕರಲಿಂಗ ಗುಡಿಯಲ್ಲೂ  ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನೆರವೇರಿತು. .ಇನ್ನೂ ನಗರದ ಆರಾಧ್ಯ ದೈವ ಸಿದ್ಧೇಶ್ವರ ಗುಡಿ, ಜೋರಾಪುರಪೇಟೆಯ ಶಂಕರಲಿಂಗ ಗುಡಿ, ಕಪಿಲೇಶ್ವರ ಗುಡಿ, ಮಹಾದೇವ ಗುಡಿ ಸೇರಿದಂತೆ ಅನೇಕ ಶಿವಾಲಯಗಳಲ್ಲಿ ಮಹಾಶಿವರಾತ್ರಿ ಆಚರಣೆ ನಡೆಯಿತು. ಅಪಾರ ಭಕ್ತರು ಉಪವಾಸ ವ್ರತಾಚರಣೆ ನಡೆಸಿದರು. ರಾತ್ರಿಯಿಡಿ ದೇಗುಲಗಳಲ್ಲಿ ಭಜನೆ ನಡೆಸುವ ಮೂಲಕ ಜಾಗರಣೆ ಕೈಗೊಂಡರು. ಸದಾ ಶಿವನನ್ನು ಜಪಿಸಿದರು. ಓಂ ನಮಃ ಶಿವಾಯ ಮಂತ್ರ ದಿನವಿಡೀ ದೇಗುಲಗಳಲ್ಲಿ ಅನುರಣಿಸಿತು.

Leave a Comment