ಶಿವಕುಮಾರ ಶ್ರೀಗಳ 113ನೇ ಜನ್ಮ ಜಯಂತಿ ಸರಳ ಆಚರಣೆ

ತುಮಕೂರು, ಏ. ೧- ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಬದುಕಿಗೆ ಬೆಳಕಾಗಿದ್ದ ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಹೆಸರುವಾಸಿಯಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 113ನೇ ಜನ್ಮಜಯಂತಿಯನ್ನು ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ಅತ್ಯಂತ ಸರಳವಾಗಿ ಎಂದಿನಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.

ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡದಂತೆ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಲಿಂಗೈಕ್ಯ ಶ್ರೀಗಳ 113ನೇ ಜನ್ಮ ಜಯಂತಿ ಅದ್ದೂರಿ ಆಚರಣೆಯನ್ನು ಮಠದ ಆಡಳಿತ ಮಂಡಳಿ ರದ್ದು ಮಾಡಿದ್ದು, ಎಂದಿನಂತೆ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ಮುಂಜಾನೆಯೇ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಇಷ್ಟಲಿಂಗ ಪೂಜೆ ನೆರವೇರಿಸಿ ಶ್ರೀಗಳ ಗದ್ದುಗೆಗೆ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.

ನಂತರ ಶ್ರೀಗಳ ಧ್ಯಾನ ಮಂದಿರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಧ್ಯಾನ ಮಾಡಲಾಯಿತು.

ಪ್ರತಿ ವರ್ಷ ಏ. 1 ರಂದು ಶ್ರೀಮಠಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿತ್ತು. ಬರುವ ಭಕ್ತಾದಿಗಳೆಲ್ಲರಿಗೂ ವಿಶೇಷವಾಗಿ ತಯಾರಿಸಲಾಗುತ್ತಿದ್ದ ವಿವಿಧ ಬಗೆಯ ಖಾದ್ಯಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತಿತ್ತು.

ಆದರೆ ಈ ಬಾರಿ ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ಯಾರೊಬ್ಬರೂ ಗದ್ದುಗೆ ದರ್ಶನಕ್ಕೆ ಆಗಮಿಸಿಲ್ಲ.
ಮಧ್ಯಾಹ್ನ ಶ್ರೀಮಠದಲ್ಲಿರುವ 2 ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಗಂಡಾಂತರ ದೂರವಾಗಲಿ

ನಂತರ ಮಾತನಾಡಿದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ದೇಶದಲ್ಲಿ ಎಂದೂ ಕಂಡರಿಯದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಯಾರೂ ಸಹ ಒಬ್ಬರನ್ನೊಬ್ಬರು ಮುಟ್ಟದಂತಹ ಸನ್ನಿವೇಶ ಎದುರಾಗಿದೆ. ಹಾಗಾಗಿ ನಮ್ಮ ದೇಶಕ್ಕೆ ಬಂದಿರುವ ಗಂಡಾಂತರ ದೂರವಾಗಲಿ ಎಂದು ಪೂಜ್ಯರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಪ್ರಸ್ತುತ ದಿನಗಳಲ್ಲಿ ದೇಶದ ಜನರಲ್ಲಿ ಭಯ, ಆತಂಕ ಮನೆ ಮಾಡಿದೆ. ವಿದೇಶಗಳಿಂದ ಬಂದವರು ನಮ್ಮ ದೇಶಕ್ಕೆ ಕೊರೊನಾ ಸೋಂಕನ್ನು ತಂದಿದ್ದಾರೆ. ಇದರ ನಿಗ್ರಹಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಜನಸಾಮಾನ್ಯರು ಸಹ ಹೊರಗಡೆ ಬಾರದೆ ಮನೆಯಲ್ಲೇ ಇದ್ದು ಈ ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಳೆದ 2 ವರ್ಷಗಳಿಂದ ಪೂಜ್ಯರ ಭೌತಿಕ ದರ್ಶನ ನಮಗೆ ಇಲ್ಲದಿದ್ದರೂ ಸಹ ಅವರ ಭಾವನಾತ್ಮಕವಾದ ಭಾವನೆಯ ಭಕ್ತಿಯೊಂದಿಗೆ ಸ್ಮರಣೆ ಮಾಡುವ ಮೂಲಕ ನಮ್ಮ ಬದುಕನ್ನು ಹಸನು ಮಾಡಿಕೊಳ್ಳೋಣ ಎಂದರು.

ಏ. 1 ರಂದು ಮಠಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಪೂಜ್ಯರ ಗದ್ದುಗೆ ದರ್ಶನಾಶೀರ್ವಾದ ಪಡೆದು ಪುನೀತರಾಗುತ್ತಿದ್ದರು. ಆದರೆ ಈ ಬಾರಿ ಭಕ್ತಱ್ಯಾರು ಮಠಕ್ಕೆ ಬರದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಮನೆಯಲ್ಲೇ ಕುಳಿತು ಶ್ರೀಗಳನ್ನು ಸ್ಮರಿಸಬೇಕು ಎಂದರು.

ಶ್ರೀಗಳು ಎಂದೂ ವೈಯಕ್ತಿಕವಾಗಿ ಅದ್ದೂರಿ ಆಡಂಬರದ ಆಚರಣೆ ಮಾಡಿಕೊಳ್ಳುವಂತರೂ ಅಲ್ಲ. ಭಕ್ತರ ಒತ್ತಾಯದ ಮೇರೆಗೆ ಶ್ರೀಗಳ ಹುಟ್ಟುಹಬ್ಬ ಆಚರಣೆಯನ್ನು  ಗುರುವಂದನಾ ಮಹೋತ್ಸವವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು ಎಂದರು.

ಶ್ರೀಗಳು 111 ವರ್ಷಗಳ ಕಾಲ ತಮ್ಮ ಇಡೀ ಬದುಕನ್ನು ತಪೋಮಯವಾಗಿಸುವ ಜತೆಗೆ ಜ್ಯೋತಿಮಯವಾಗಿ ಬೆಳಗಿ ಲಕ್ಷಾಂತರ ಜನರ ಮನೆಯ ನಂದಾದೀಪವಾಗಿ ಬೆಳಗುತ್ತಿದ್ದಾರೆ. ಲೋಕೋದ್ದಾರಕ್ಕಾಗಿ ಬದುಕು ಸೀಮಿತವಾಗಿಟ್ಟವರ ಬದುಕು ದೊಡ್ಡ ದಿಮ್ಮಿಯಾಗೆ ಇರುತ್ತದೆ. ಅದು ಎಲ್ಲೂ ಮುಳುಗುವುದಿಲ್ಲ. ಇದೇ ರೀತಿ ಶ್ರೀಗಳ ಬದುಕು ಸಹ ಇತ್ತು ಎಂದರು.

ಶ್ರೀಗಳು ಯಾವುದೇ ರೀತಿಯ ಗೌರವಾಧಾರಗಳನ್ನು ಅಪೇಕ್ಷೆ ಪಟ್ಟವರಲ್ಲ. ವೈಯಕ್ತಿವಾಗಿ ಏನನ್ನೂ ಬಯಸದೇ ಸಮಾಜಕ್ಕಾಗಿ ದುಡಿದು ಬದುಕನ್ನು ಮುಡುಪಾಗಿಟ್ಟವರು. ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ಪೂಜ್ಯರು ಲಕ್ಷಾಂತರ ಮಕ್ಕಳ ಬದುಕು ಹಸನು ಮಾಡಿದ್ದಾರೆ ಎಂದರು.

ಬದುಕಿನಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಿದ ಶ್ರೀಗಳು ಬದುಕು ಅವಿಸ್ಮರಣೀಯ ಎಂದರು.

Leave a Comment