ಶಿಲ್ಪಾ ಮೆಡಿಕೇರ್ : ಕ್ಯಾನ್ಸರ್ ರೋಗ ಜಾಗೃತಿ – ಉಚಿತ ತಪಾಸಣಾ ಶಿಬಿರ

ಹಿಂದುಳಿದ ಜಿಲ್ಲೆ : ಬಡವರ ಆರೋಗ್ಯ ರಕ್ಷಣೆ ಶ್ಲಾಘನೀಯ – ಎನ್‌ಎಸ್‌ಬಿ
ರಾಯಚೂರು.ಜೂ.20- ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಉದ್ಯಮಿಗಳಿಂದ ಸಾಮಾಜಿಕ ಚಟುವಟಿಕೆಗಳು ಹೆಚ್ಚಿನ ರೀತಿಯಲ್ಲಿ ನಡೆಯುವುದರಿಂದ ಈ ಭಾಗದ ಬಡವರಿಗೆ ಅನುಕೂಲವಾಗುತ್ತದೆಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರು ಹೇಳಿದರು.
ಅವರಿಂದು ಜೈನ್ ಮಂದಿರದ ಜೈನ್ ಭವನದಲ್ಲಿ ಶಿಲ್ಪಾ ಮೆಡಿಕೇರ್ ಹಾಗೂ ಟಾಟಾ ಮೆಮೊರಿಯಲ್ ಹಾಸ್ಪೆಟಲ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಕ್ಯಾನ್ಸರ್ ವಿಭಾಗದಲ್ಲಿ ಅನೇಕ ಸಂಶೋಧನೆ ಮಾಡಿದ ಟಾಟಾ ಮೆಮೊರಿಯಲ್ ಸಂಸ್ಥೆಯ ವೈದ್ಯರನ್ನು ಜಿಲ್ಲೆಗೆ ಕರೆತರುವ ಮೂಲಕ ಈ ಭಾಗದಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಅತ್ಯುತ್ತಮ ಕಾರ್ಯ ಶಿಲ್ಪಾ ಮೆಡಿಕೇರ್ ಕೈಗೊಂಡಿದೆ.
ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ಇನ್ನೂ ಹೆಚ್ಚಿನ ಸೌಲಭ್ಯ ಅಗತ್ಯವಿದೆ. ಇದಕ್ಕಾಗಿ ನಿರಂತರ ಹೋರಾಟ ನಡೆಸಲಾಗುತ್ತಿದೆ. ಕ್ಯಾನ್ಸರ್ ಒಂದು ಅತ್ಯಂತ ಮಾರಕ ರೋಗವಾಗಿದೆ. ಮೊದಲನೇ ಹಂತದಲ್ಲಿ ಇದನ್ನು ಗುರುತಿಸಿದರೇ, ಚಿಕಿತ್ಸೆ ನೀಡಲು ಸಾಧ್ಯ. ಈ ಹಿನ್ನೆಲೆಯಲ್ಲಿ, ಅತ್ಯಂತ ದುಬಾರಿ ವೆಚ್ಚದ ಚಿಕಿತ್ಸೆಯ ಈ ರೋಗವನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಲು ಸಾಧ್ಯವಾಗಲು ಇಂತಹ ಜಾಗೃತಿ ಶಿಬಿರ ಈ ಭಾಗದ ಜನರ ಅಗತ್ಯವಾಗಿದೆ.
ಶಿಲ್ಪಾ ಮೆಡಿಕೇರ್ ಈ ಭಾಗದಲ್ಲಿ ಅನೇಕ ಸಮಾಜ ಸುಧಾರಣೆ ಕೆಲಸ ಹಮ್ಮಿಕೊಳ್ಳುತ್ತಾ ಬಂದಿದೆ. ಈಗ ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗ ಬಗ್ಗೆ ಜಾಗೃತಿ ಮತ್ತು ಪತ್ತೆ ಕಾರ್ಯಕ್ಕೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಇವರ ಈ ಚಟುವಟಿಕೆಗಳಿಗೆ ಜನಪ್ರತಿನಿಧಿಯಾಗಿ ನಾವು ಮತ್ತು ಸಾರ್ವಜನಿಕರು ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಜಿಲ್ಲೆಯಲ್ಲಿ ಕೈಗಾರಿಕೆಗಳು ಹೆಚ್ಚುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.
ಶಿಲ್ಪಾ ಮೆಡಿಕೇರ್ ಕೇವಲ ದೇಶಕ್ಕೆ ಮಾತ್ರ ಸೀಮಿತವಾಗಿರದೇ, ಜಾಗತೀಕ ಮಟ್ಟದಲ್ಲಿ ಪ್ರತಿಷ್ಠಿತ ಕಂಪನಿಯಾಗಿ ಗುರುತಿಸಿಕೊಂಡಿದೆ. ಇವರಿಂದ ಈ ಭಾಗದ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಜನ ಸೇವೆ ನಡೆಯಲಿದೆ. ಇದಕ್ಕೆ ನಾವು ಸಂಪೂರ್ಣ ಬೆನ್ನೆಲುಬಾಗಿ ನಿಲ್ಲುತ್ತೇವೆಂದು ಹೇಳಿದರು.
ಈ ಸಮಾರಂಭಕ್ಕೆ ಮುಖ್ಯಾತಿಥಿಗಳಾಗಿ ಆಗಮಿಸಿದಂತಹ ಜಿಲ್ಲಾಧಿಕಾರಿ ಬಿ.ಶರತ್ ಅವರು ಮಾತನಾಡುತ್ತಾ, ಬೇರೆ ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ನಡೆಸುತ್ತವೆ. ಆದರೆ, ಜಿಲ್ಲೆಯಲ್ಲಿ ಇತ್ತ ಸ್ವಯಂ ಸೇವಾ ಸಂಸ್ಥೆಗಳ ಕೊರತೆಯಿದೆ. ಈ ಹಿನ್ನೆಲೆ, ಎಲ್ಲಾ ಕೆಲಸ ಕಾರ್ಯಗಳಲ್ಲಿ ಸರ್ಕಾರ ಅಥವಾ ಜಿಲ್ಲಾಡಳಿತವೇ ಮಾಡಬೇಕಾದಂತಹ ಪರಿಸ್ಥಿತಿಯಿದೆ.
ಸಾಮಾಜಿಕವಾಗಿ ಜಾಗೃತಿ ಅನೇಕ ಸಮಸ್ಯೆ ನಿವಾರಣೆಗೆ ಕಾರಣವಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿಯೂ ಇಂತಹ ಜಾಗೃತಿ ಕಾರ್ಯ ನಡೆಯುವುದರಿಂದ ಜನರಿಗೆ ಅನುಕೂಲ. ಕ್ಯಾನ್ಸರ್ ರೋಗದಂತಹ ಮಾರಕ ರೋಗವನ್ನು ಚಿಕಿತ್ಸೆಗಿಂತ ಜಾಗೃತಿಯಿಂದ ಪರಿಣಾಮಕಾರಿಯಾಗಿ ತಡೆಬಹುದಾಗಿದೆ. ಹೆಚ್ಚಿನ ಬಡತನದ ಜಿಲ್ಲೆಯಲ್ಲಿ ಟಾಟಾ ಮೆಮೊರಿಯಲನಂತಹ ಪ್ರತಿಷ್ಠಿತ ತಜ್ಞ ವೈದ್ಯರ ತಂಡದೊಂದಿಗೆ ಶಿಲ್ಪಾ ಮೆಡಿಕೇರ್ ಉಚಿತ ಕ್ಯಾನ್ಸರ್ ಶಿಬಿರ ಮತ್ತು ಜಾಗೃತಿ ತಪಾಸಣೆ ಕೇಂದ್ರ ಹಮ್ಮಿಕೊಂಡಿರುವುದು ಮೆಚ್ಚುವಂತಾಗಿದೆ.
ಇಂತಹ ಕಾರ್ಯಕ್ರಮ ಬಡವರಿಗೆ ಸಹಾಯಕವಾಗಲಿವೆ. ಜಿಲ್ಲೆಯಲ್ಲಿ ಕೇವಲ ಶೇ.3 ರಷ್ಟು ಅರಣ್ಯ ಪ್ರದೇಶವಿದೆ. ಇದರಿಂದ ಪರಿಸರ ಅಸಮತೋಲನ ತೀವ್ರವಾಗಿದೆ. ಇದನ್ನು ಸರಿದೂಗಿಸಲು ವೃಕ್ಷ ಬೆಳೆಸುವ ಕಾರ್ಯ ನಡೆಯಬೇಕು. ಈ ದಿಕ್ಕಿನಲ್ಲಿ ಎಲ್ಲರೂ ತಮ್ಮ ತಮ್ಮ ಹಂತದಲ್ಲಿ ಮರ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕೆರೆ ಹೂಳು ತೆಗೆಯುವ ಬಹುದೊಡ್ಡ ಆಂದೋಲನಾವನ್ನು ಭಾರತೀಯ ಜೈನ್ ಸಮಾಜ ಹಮ್ಮಿಕೊಂಡಿದೆ. ಇದಕ್ಕೆ ಜಿಲ್ಲಾಡಳಿತದಿಂದ ಎಲ್ಲಾ ಸಹಾಯ, ಸಹಕಾರ ನೀಡಲಾಗುತ್ತಿದೆ. ಈ ಕೆರೆ ಹೂಳು ತೆಗೆಯುವ ಕಾರ್ಯದಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ನೀರಿನ ಸಂಗ್ರಹ ಅಂತರ್ಜಲ ಮಟ್ಟ ವೃದ್ಧಿಗೆ ನೆರವಾಗುವುದಷ್ಟಲ್ಲದೇ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಾಯವಾಗುವುದೆಂದು ಹೇಳಿದರು.
ಮತ್ತೊಬ್ಬ ಮುಖ್ಯಾತಿಥಿಗಳಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಮಾತನಾಡುತ್ತಾ, ಕ್ಯಾನ್ಸರ್ ರೋಗ ಬಗ್ಗೆ ಹೆಚ್ಚಿನ ರೀತಿಯಲ್ಲಿ ಜಾಗೃತಿ ಕಾರ್ಯ ಕೈಗೊಳ್ಳುವುದು ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಇಂತಹ ಶಿಬಿರಗಳು ಇನ್ನೂ ಹೆಚ್ಚಿನ ಭಾಗಗಳಲ್ಲಿ ನಡೆಯಲೆಂದು ಹೇಳಿದ ಅವರು, ಜಿಲ್ಲೆಯಲ್ಲಿ 1200 ಪೊಲೀಸರಿದ್ದೇವೆ. ನಮಗೂ ಪ್ರತ್ಯೇಕ ಕ್ಯಾನ್ಸರ್ ಶಿಬಿರ ನಿರ್ವಹಿಸುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಸಂಚಾರ ಮತ್ತು ಡ್ರಗ್ಸ್ ಸಮಸ್ಯೆ ಇರುವುದಾಗಿ ಮಾಹಿತಿ ಪಡೆದಿದ್ದೇನೆ. ಈ ಎರಡು ಸಮಸ್ಯೆ ಸಂಪೂರ್ಣ ನಿವಾರಿಸಲು ಈಗಾಗಲೇ ಪ್ರಾಥಮಿಕ ಹಂತದ ಕೆಲಸ, ಕಾರ್ಯ ಆರಂಭಿಸಲಾಗಿದೆ. ಇದಕ್ಕೆ ಬೇಕಾದ ಚರ್ಚೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ ತೀವ್ರವಾಗಿದ್ದು, ಗಿಡ ಬೆಳೆಸುವ ಮೂಲಕ ವಾತಾವರಣದ ಉಷ್ಣತೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆ. ಜಿಲ್ಲೆಯಾದ್ಯಂತ 1200 ಪೊಲೀಸರು ತಲಾ ಎರಡು ಗಿಡಗಳಂತೆ ಬೆಳೆಸಲು ಸೂಚಿಸಲಾಗಿದೆ. 2400 ಗಿಡ ಬೆಳೆಸಲಾಗುತ್ತದೆ. ಇವು ಬೆಳೆದು ಮರವಾಗುವವರೆಗೂ ಅವುಗಳ ಜವಾಬ್ದಾರಿ ನಿರ್ವಹಿಸಲು ಪೊಲೀಸರಿಗೆ ಹೇಳಲಾಗಿದೆ.
ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರು ಮಾತನಾಡುತ್ತಾ, ಶಿಲ್ಪಾ ಮೆಡಿಕೇರ್ ಒಂದು ಈ ಭಾಗದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಅವರು ತಮ್ಮ ವ್ಯವಹಾರದೊಂದಿಗೆ ಈ ಭಾಗದ ಜನರ ಅಭಿವೃದ್ಧಿಯಲ್ಲಿ ಭಾಗೀಯಾಗುತ್ತಿದ್ದಾರೆ ಎನ್ನುವುದಕ್ಕೆ ಇಂತಹ ಕಾರ್ಯಕ್ರಮ ನಿದರ್ಶನವಾಗಿವೆ. ನಾನು ಶಾಸಕನಾಗಿದ್ದಾಗ ಚೀನಾ ದೇಶಕ್ಕೆ ನಿಯೋಗ ಕೊಂಡೊಯ್ಯಲಾಗಿತ್ತು. ಶಾಂಗೈನಲ್ಲಿ ಒಬ್ಬರು ನಮ್ಮ ಬಗ್ಗೆ ವಿಚಾರಿಸಿದರು. ಈ ಸಂದರ್ಭದಲ್ಲಿ ನಾವು ರಾಯಚೂರಿನಿಂದ ಬಂದಿರುವುದಾಗಿ ಹೇಳಿದಾಗ ಅವರು, ಶಿಲ್ಪಾ ಮೆಡಿಕೇರ್ ಬಗ್ಗೆ ನಿಮಗೆ ಗೊತ್ತಾ ಎಂದು ಕೇಳುವಷ್ಟು ಮಟ್ಟಕ್ಕೆ ಶಿಲ್ಪಾ ಮೆಡಿಕೇರ್ ಎತ್ತರಕ್ಕೆ ಬೆಳೆದಿದೆಂದು ಹೇಳಿದರು.
ಆರಂಭದಲ್ಲಿ ಶಿಲ್ಪಾ ಮೆಡಿಕೇರ್ ಅಧ್ಯಕ್ಷ ಓಂಪ್ರಕಾಶ ಇನ್ನಾಣಿ ಅವರು ಸ್ವಾಗತಿಸಿದರು. ಕಮಲ್ ಕುಮಾರ ನಿರೂಪಿಸಿದರು. ವೇದಿಕೆಯಲ್ಲಿ ಶಿಲ್ಪಾ ಮೆಡಿಕೇರ್ ವ್ಯವಸ್ಥಾಪಕ ನಿರ್ದೇಶಕರಾದ ವಿಷ್ಣುಕಾಂತ ಬುತಡಾ ಅವರು ಉಪಸ್ಥಿತರಿದ್ದರು.

Leave a Comment