ಶಿರಾಡಿ ಘಾಟ್ ಸಂಚಾರಮುಕ್ತ!

ಜನಸಾಮಾನ್ಯರಿಗಲ್ಲ, ರಾಜಕಾರಣಿಗಳಿಗೆ ಮಾತ್ರ
ಮಂಗಳೂರು, ಜು.೧೧- ಜನಸಾಮಾನ್ಯರಿಗೆ ಸಂಚಾರ ನಿಷೇಧವಿರುವ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಜನಪ್ರತಿನಿಧಿಗಳು, ಅವರ ಬೆಂಗಾವಲು ಪಡೆ ಎಗ್ಗಿಲ್ಲದೆ ಸಂಚಾರ ನಡೆಸುತ್ತಿದೆ. ನಿನ್ನೆ ಪೊಲೀಸ್ ಬೆಂಗಾವಲಿನೊಂದಿಗೆ ಆಗಮಿಸಿದ ಜನಪ್ರತಿನಿಧಿಗಳ ತಂಡ ಮರ ಬಿದ್ದ ಪರಿಣಾಮ ಅರ್ಧದಲ್ಲೇ ಬಾಕಿಯಾದ ಘಟನೆ ನಡೆದಿದೆ. ನಿನ್ನೆ ಸಂಜೆ ಮಾಜಿ ಸಚಿವ ಬಿಎ ಮೊಯ್ದೀನ್ ಅಂತಿಮ ಸಂಸ್ಕಾರಕ್ಕೆಂದು ಸ್ಪೀಕರ್ ರಮೇಶ್ ಕುಮಾರ್, ನಗರಾಭಿವೃದ್ಧಿ ಸಚಿವ ಸಚಿವ ಯುಟಿ ಖಾದರ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಇದ್ದ ಕಾರುಗಳು ಶಿರಾಡಿ ಘಾಟ್‌ನಲ್ಲಿ ಸಂಚಾರ ನಿಷೇಧ ಇದ್ದರೂ ಹಾಸನದ ಸಕಲೇಶಪುರ ಮಾರ್ಗವಾಗಿ ಶಿರಾಡಿ ಘಾಟ್‌ಗೆ ನುಗ್ಗಿದ್ದವು.
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಜನಪ್ರತಿನಿಧಿಗಳ ತಂಡ ಸುಲಭದ ದಾರಿಯೆಂದು ಶಿರಾಡಿ ಘಾಟಿಯಲ್ಲಿ ಆಗಮಿಸಿತ್ತು. ಆದರೆ, ಈ ಕಾರುಗಳು ಘಾಟ್ ರಸ್ತೆ ಇಳಿದು ದ.ಕ. ಭಾಗ ತಲುಪುತ್ತಿದ್ದಂತೆ ಲಾವತ್ತಡ್ಕ ಎಂಬಲ್ಲಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗಡ್ಡ ಬಿದ್ದು ತಡೆ ನೀಡಿತ್ತು. ಜನಪ್ರತಿನಿಧಿಗಳ ದರ್ಪದ ನಡೆಗೆ ಕೊನೆಗೂ ರಸ್ತೆಗಡ್ಡ ಬಿದ್ದ ಮರವೇ ಅಡ್ಡಿಯಾಗಿ ಪರಿಣಮಿಸಿದ್ದು ವಿಶೇಷ. ಕಳೆದ ೬ ತಿಂಗಳಿನಿಂದ ಶಿರಾಡಿಘಾಟ್ ರಸ್ತೆ ಕಾಂಕ್ರೀಟ್ ಕಾಮಗಾರಿ ಹಿನ್ನೆಲೆಯಲ್ಲಿ ಬಂದ್ ಆಗಿರುವ ಕಾರಣ ಸ್ಥಳೀಯರಿಗೂ ಪ್ರವೇಶ ನೀಡುತ್ತಿರಲಿಲ್ಲ. ಅಲ್ಲಿನ ಜನ ಸುತ್ತುಬಳಸಿ ಹೋಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳಿಗೆ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗುವ ಮೊದಲೇ ಹೆದ್ದಾರಿಯಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿದ್ದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Leave a Comment