ಶಿರಾಡಿ ಘಾಟ್‌ನಲ್ಲಿ ವಿಐಪಿ ಸಂಚಾರ

ಸ್ಥಳೀಯರ ಪ್ರತಿಭಟನೆ
ಮಂಗಳೂರು, ಜು.೧೨- ಶಿರಾಡಿ ಘಾಟ್‌ನಲ್ಲಿ ಸರಕಾರಿ ಅಧಿಕಾರಿಗಳಿಗೆ ಸ್ಥಳೀಯ ನಿವಾಸಿಗಳು ದಿಗ್ಬಂಧನ ಹಾಕಿದ ಘಟನೆ ನಡೆದಿದೆ. ಶಿರಾಡಿ ಘಾಟ್‌ನಲ್ಲಿ ಅಧಿಕಾರಿಗಳು ಮಾತ್ರ ಸಂಚಾರ ಮಾಡುತ್ತಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲಿ ಅಧಿಕಾರಿಗಳು ಸಂಚರಿಸುವುದಕ್ಕೆ ಯಾವುದೇ ಆಕ್ಷೇಪ ಇಲ್ಲ. ಆದರೆ ಜನಸಾಮಾನ್ಯರಿಗೆ ತೊಂದರೆ ಕೊಡಲಾಗುತ್ತಿದೆ ಎಂಬುದು ಸಿಟ್ಟಿಗೆ ಕಾರಣವಾಗಿದೆ.
ಜುಲೈ ೧೫ರವರೆಗೆ ಶಿರಾಡಿ ಘಾಟ್‌ನಲ್ಲಿ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡದ ಹಿನ್ನೆಲೆಯಲ್ಲಿ ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಜನಸಾಮಾನ್ಯರ ಸಂಚಾರಕ್ಕೆ ಅನುಮತಿ ನೀಡದೆ ಹೆದ್ದಾರಿ ಪ್ರಾಧಿಕಾರದ ಆಧಿಕಾರಿಗಳು ಅಕ್ರಮವಾಗಿ ಸಂಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಸಾರ್ವಜನಿಕರಿಗೂ ಅನುಮತಿ ಸಂಚಾರಕ್ಕೆ ಅನುಮತಿ ನೀಡುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಅಧಿಕಾರಿಗಳ ವಾಹನಗಳಿಗೆ ಮುತ್ತಿಗೆ ಹಾಕಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಸ್ಥಳೀಯರ ಮನವೊಲಿಸಿದ್ದಾರೆ. ಆದರೆ ಜನಸಾಮಾನ್ಯರಿಗೆ ಇರುವ ನಿಯಮಾವಳಿ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳಿಗೆ ಯಾಕಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

Leave a Comment