ಶಿಯಾ ಪಂಗಡದವರು ಪೂರಕ ಮುಸಲ್ಮಾನರಲ್ಲ-ತೊರಗಲ್ಲ

ಹುಬ್ಬಳ್ಳಿ, ನ 14- ಕಳೆದ ಸುಮಾರು ವರ್ಷಗಳಿಂದ ದೇಶದ ಶಿಯಾ ಪಂಗಡದವರು ತಮ್ಮ ವಿವಿಧ ಸಂಸ್ಥೆಗಳ ಹೆಸರು ಹೇಳಿ ಏಕತರ್ಪಿ ನಿರ್ಣಯದ ಮಾತುಗಳನ್ನು ಆಡುತ್ತಿದ್ದು, ಧರ್ಮ ಗ್ರಂಥಗಳಲ್ಲಿಯೂ ಇಲ್ಲ ಸಲ್ಲದ ಅಪವಾದ ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ಶಾಂತಿ ಕದಡಬಹುದು ಎಂದು ಧಾರವಾಡ ಜಿಲ್ಲಾ ಜೈಭಾರತ ಜನ ಸೇವಾ ಸಂಘದ ಅಧ್ಯಕ್ಷ ಐ.ಎಂ. ತೊರಗಲ್ಲ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಯಾ ಪಂಗಡದವರು ದೇಶದ ಪ್ರತಿಯೊಂದು ವಿಷಯದಲ್ಲಿ ಮುಸ್ಲಿಂ ಮೌಲ್ವಿಗಳೊಂದಿಗೆ, ಮುಸ್ಲಿಂ ಬುದ್ಧಿ ಜೀವಿಗಳೊಂದಿಗೆ, ಸುನ್ನಿ ಹುದ್ದೆದಾರರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳದೇ ಇರುವುದನ್ನು ಗಮನಿಸಿದ ಬ್ರಿಟೀಷರು 1947 ರಲ್ಲಿ ಮುಂದೆ ಏನೇ ನಿರ್ಣಯ ಕೈಗೊಳ್ಳಬೇಕಾದರೂ ಸುನ್ನಿ ವಕ್ಫ ಬೋರ್ಡ್ ಜೋತೆ ಚರ್ಚಿಸಿ ಒಮ್ಮತ ನಿರ್ಧಾರಕ್ಕೆ ಬರಬೇಕು ಎಂದು ತಮ್ಮ ಆದೇಶದಲ್ಲಿ ಸುತ್ತೋಲೆ ಹೊರಡಿಸಿದ್ದರು ಎಂದು ತೊರಗಲ್ಲ ಭಾರತ ಸರ್ಕಾರಕ್ಕೆ ಮನವಿ ಮೂಲಕ ತಿಳಿಸಿದ್ದಾರೆ.
ಬಾಬ್ರಿ ಮಸಜಿದ ವಿಷಯದಲ್ಲಿ ಶಿಯಾ ಪಂಗಡವು ಪಕ್ಷಪಾತ ಮಾಡುತ್ತಿದೆ. ಈ ಹಿಂದೆ 2010 ಸೆಪ್ಟೆಂಬರ್ 30ಕ್ಕೆ ಅಲಹಾಬಾದ ಹೈಕೋರ್ಟ್ 2.77 ಎಕರೆ ಭೂಮಿಯನ್ನು ಶ್ರೀರಾಮ ಮಂದಿರ ಹಾಗೂ ಸುನ್ನಿ ವಕ್ಫ ಬೋರ್ಡ್ ಮತ್ತು ನಿರ್ಮೋಹಿ ಅಖಾಡಾದವರಿಗೆ ಸಮನಾಗಿ ಹಂಚಿತ್ತು. ಆದರೆ ಈ ಮೂರೂ ಸಂಸ್ಥೆಗಳು ತಮಗೆ ಒಪ್ಪಿಗೆ ಇಲ್ಲದೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು. ನಮ್ಮ ಜಾತ್ಯತೀತ ರಾಷ್ಟ್ರದಲ್ಲಿರುವ ಅಯೋಧ್ಯಾದಲ್ಲಿ ನಮಗೆ ಶ್ರೀರಾಮನೂ ಬೇಕು, ರಹಿಮನು ಬೇಕು ಎಂದು ಎಲ್ಲ ಭಾರತೀತರು ಮನಗಾಣಬೇಕು. ಪೂರ್ವಜರು ತಪ್ಪು ಮಾಡಿರಬಹುದು, ಅಂತಹ ತಪ್ಪು ಮರುಕಳಿಸಬಾರದು. ಎಲ್ಲ ಧರ್ಮದವರು ಸಹಬಾಳ್ವೆ ಹಾಗೂ ಭಾವೈಕ್ಯತೆಯಿಂದ ಬಾಳುವುದೇ ಮುಸಲ್ಮಾನ ಬಾಂಧವರ ಬೇಡಿಕೆ ಆಗಿದೆ ಎಂದು ಅವರು ಹೇಳಿದರು.
ಈ ವಿಷಯವಾಗಿ ಗಾಯದ ಮೇಲೆ ಬರೆ ಎಳೆಯುವಂತೆ ಶಿಯಾ ವಕ್ಫ ಮಂಡಳಿ ಹಿಂದೆ ಮುಂದೆ ವಿಚಾರಿಸದೆ ಏಕತರ್ಪಿ ನಿರ್ಣಯ ತೆಗೆದುಕೊಳ್ಳುತ್ತಿರುವುದನ್ನು ಹಿಂದಕ್ಕೆ ಪಡೆಯಿಸಿರಿ ಹಾಗೂ ಈ ಶಿಯಾ ಪಂಗಡದ ಏಕತರ್ಪಿ ನಿರ್ಣಯವನ್ನು ನಾವು ಭಾರತೀಯ ಸುನ್ನಿ ಪಂಗಡದವರು ಯಾವತ್ತೂ ಒಪ್ಪುವುದಿಲ್ಲ. ಆದ್ದರಿಂದ ಇನ್ನುಮುಂದೆ ಶಿಯಾ ಪಂಗಡದವರು ಏಕತರ್ಪಿಯಾದ ಯಾವುದೇ ಹೇಳಿಕೆಗಳನ್ನು ನೀಡಬಾರದೆಂದು ರಾಷ್ಟ್ರಭವನದಿಂದ ಒಂದು ಸುತ್ತೋಲೆ ಹೊರಡಿಸಿರಿ ಎಂದು ದೇಶದ ರಾಷ್ಟ್ರಪತಿಗಳಲ್ಲಿ ಸಂಘದ ಐ.ಎಂ. ತೊರಗಲ್ಲ ಮನವಿ ಮಾಡಿದ್ದಾರೆ.
ಸುಲಾವುದ್ದೀನ ಮುಲ್ಲಾ, ಜೆ.ಎಮ್. ಗೋಕಾಕ, ಕೆ.ಕೆ. ಮುಲ್ಲಾ ಮುಂತಾದವರು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Comment