ಶಿಪ್ ಯಾರ್ಡ್‌ನಲ್ಲಿ ಸ್ಫೋಟ ಐವರ ಸಾವು, 13 ಮಂದಿಗೆ ಗಾಯ

ಕೊಚ್ಚಿ, ಫೆ. ೧೩- ನೌಕಾ ನೆಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 5 ಮಂದಿ ಸಾವನ್ನಪ್ಪಿ, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡಿರುವವರ ಪೈಕಿ ಹಲವು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಶಿಪ್ ಸಾಗರ್ ಭೂಷಣ್ ಹಡಗು ನಿರ್ಮಾಣ ಕೇಂದ್ರದಲ್ಲಿ ದುರಸ್ತಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಫೋಟದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತೈಲ ಮತ್ತು ನೈಸರ್ಗಿಕ ನಿಗಮ ಹೇಳಿದೆ.

ಸ್ಫೋಟಗೊಂಡ ತಕ್ಷಣ ಇಬ್ಬರನ್ನು ರಕ್ಷಿಸಿದ್ದು, ಮತ್ತಷ್ಟು ಮಂದಿಯನ್ನು ರಕ್ಷಿಸುವ ಕೆಲಸ ಸಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಎಂ ಸಂತಾಪ

ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಮಂದಿಗೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಪಿನರಾಯಿ ವಿಜಯನ್, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಘಟನಾ ಸ್ಥಳದಲ್ಲಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆಗಳಿದ್ದು, ಅವರನ್ನು ರಕ್ಷಿಸುವಂತೆ ಅಧಿಕಾರಿಗಳಿಗೆ ಪಿನರಾಯಿ ವಿಜಯನ್ ಸೂಚನೆ ನೀಡಿದ್ದಾರೆ.

Leave a Comment