ಶಿಖರ್‌ ಧವನ್‌ ಅಲಭ್ಯತೆ ಭಾರತಕ್ಕೆ ಕಾಡಲ್ಲ: ಮೈಕ್‌ ಹಸ್ಸಿ

ಬರ್ಮಿಂಗ್‌ಹ್ಯಾಮ್‌, ಜೂ 20 – ಸದ್ಯ ಐಸಿಸಿ ವಿಶ್ವಕಪ್‌ 15 ಆಟಗಾರರ ಭಾರತ ತಂಡ ಬಲಿಷ್ಠವಾಗಿದೆ. ಹಾಗಾಗಿ ಹೆಬ್ಬೆರಳು ಗಾಯದಿಂದ ಟೂರ್ನಿಯಿಂದ ಹೊರ ನಡೆದಿರುವ ಶಿಖರ್‌ ಧವನ್‌ ಅವರ ಅಲಭ್ಯತೆ ತಂಡಕ್ಕೆ ಕಾಡುವುದಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮೈಕ್‌ ಹಸ್ಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಿಖರ್‌ ಧವನ್‌ ಇಲ್ಲದೇ ಇದ್ದರೂ ಸದ್ಯ ಭಾರತ ತಂಡ ಎಲ್ಲಾ ವಿಭಾಗಗಳಲ್ಲಿಯೂ ಅತ್ಯಂತ ಬಲಶಾಲಿಯಾಗಿದೆ. ಹಾಗಾಗಿ, ಕೊಹ್ಲಿ ಪಡೆಗೆ ಅವರ ಅನುಪಸ್ಥಿತಿ ಕಾಡುವುದಿಲ್ಲ. ವಿಶ್ವಕಪ್‌ ಗೆಲ್ಲಲು ಈಗ ತಂಡದಲ್ಲಿ ಇರುವ ಆಟಗಾರರೇ ಸಾಕು ಎಂದು ಹಸ್ಸಿ ಹೇಳಿರುವುದನ್ನು ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ಪ್ರಕಟಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ  ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ಶಿಖರ್‌ ಧವನ್‌ ಅವರ ಹೆಬ್ಬೆರಳಿಗೆ ಚೆಂಡು ತಾಗಿತ್ತು. ಸ್ಕ್ಯಾನ್‌ ಕೂಡ ಮಾಡಲಾಗಿದ್ದು, ವರದಿ ಆಧರಿಸಿ ವೈದ್ಯರು ಧವನ್ ಚೇತರಿಸಿಕೊಳ್ಳಲು ಇನ್ನೂ ಮೂರು ವಾರಗಳ ಅಗತ್ಯ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಸೂಚನೆಯಂತೆ ಧವನ್‌ 10 ದಿನಗಳ ಕಾಲ ವೀಕ್ಷಣೆಯಲ್ಲಿ ಇದ್ದರು. ಆದರೆ, ಬುಧವಾರ ಅವರ ಗಾಯ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣದ್ದರಿಂದ ಅವರು ಅಧಿಕೃತವಾಗಿ ವಿಶ್ವಕಪ್‌ ನಿಂದ ಹೊರ ನಡೆದರು.

ಧವನ್‌ ಬದಲಿಗೆ ದೆಹಲಿಯ ಮತ್ತೊಬ್ಬ ಎಡಗೈ ಬ್ಯಾಟ್ಸ್‌ಮನ್‌ ರಿಷಬ್‌ ಪಂತ್‌ಗೆ ಅವಕಾಶ ಕಲ್ಪಿಸಲಾಗಿದೆ. ಪಂತ್‌ ಕಳೆದ ಕೆಲವು ದಿನಗಳಿಂದಲೇ ಮೀಸಲು ಆಟಗಾರನಾಗಿ ಇಂಗ್ಲೆಂಡ್‌ಗೆ ಆಗಮಿಸಿದ್ದರು. ಬುಧವಾರ ಧವನ್‌ ಅಧಿಕೃತವಾಗಿ ಹೊರ ಬೀಳುತ್ತಿದ್ದಂತೆ ಪಂತ್‌ಗೆ ಗ್ರೀನ್‌ ಸಿಗ್ನಲ್‌ ಲಭ್ಯವಾಯಿತು.

ಶಿಖರ್‌ ಧವನ್‌ ಅವರ ಅನುಪಸ್ಥಿತಿಯಲ್ಲಿ ರೋಹಿತ್‌ ಶರ್ಮಾ ಅವರ ಜತೆ ಕೆ.ಎಲ್‌ ರಾಹುಲ್‌ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರಾಹುಲ್‌ 57 ರನ್‌ ಗಳಿಸಿದ್ದರು. ರೋಹಿತ್‌ ಜತೆ 136 ರನ್‌ ಮೊದಲನೇ ವಿಕೆಟ್‌ಗೆ ಕಲೆ ಹಾಕಿದ್ದರು. ಆ ಮೂಲಕ ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ ಇತಿಹಾಸದಲ್ಲೇ ಅತಿ ದೊಡ್ಡ ಜತೆಯಾಟ ಎಂಬ ದಾಖಲೆಯನ್ನು ಈ ಜೋಡಿ ಮಾಡಿತು. ಭಾರತ ತಂಡ ಶನಿವಾರ ಅಫ್ಘಾನಿಸ್ತಾನದ ವಿರುದ್ಧ ಮುಂದಿನ ಪಂದ್ಯ ಆಡಲಿದೆ.

Leave a Comment