ಶಿಕ್ಷಣ ಸಂಸ್ಥೆ ಬೆಳವಣಿಗೆಯಲ್ಲಿ ಶಿಕ್ಷಕ ಪಾತ್ರ ಮುಖ್ಯ : ಡಾ. ಅಜಿತಪ್ರಸಾದ

ಧಾರವಾಡ,ಡಿ6: ‘ಯಾವುದೇ ಒಂದು ಶಿಕ್ಷಣ ಸಂಸ್ಥೆ ಉನ್ನತ ದರ್ಜೆಗೆ ಏರಬೇಕಾದರೆ ಅಲ್ಲಿಯ ಶಿಕ್ಷಕರ ಪಾತ್ರ ಬಹಳ ಪ್ರಮುಖವಾದದ್ದು, ನಿಸ್ವಾರ್ಥ ಹಾಗೂ ಸಮರ್ಪಿತ ಮನೋಭಾವದಿಂದ ನಮ್ಮ ಸಂಸ್ಥೆಯ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವುದರಿಂದ ನಮ್ಮ ಸಂಸ್ಥೆಯಲ್ಲಿ ಇಂದು 17 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿಗಳು ಹಾಗೂ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಅಜಿತಪ್ರಸಾದ ಹೇಳಿದರು.
ಇಲ್ಲಿಯ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಇಲ್ಲಿ ನಿರಂತರ ಅಧ್ಯಯನ ಮತ್ತು ಪರಿಣಾಮಕಾರಿ ಬೋಧನೆ ಮಾಡುವ ಕಲೆಗಳನ್ನು ಕರಗತಮಾಡಿಕೊಳ್ಳಲು ಇಂತಹ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಲ್ಲ ಶಿಕ್ಷಕರು ಇದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.
ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕಂಚಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಎನ್. ಜಯಶಂಕರನ್ ಅವರು ‘ಶಿಕ್ಷಕರಲ್ಲಿ ನಾಲ್ಕು ವಿಧವಿದ್ದು ಉಪಾಧ್ಯಾಯ, ಪಂಡಿತ, ಆಚಾರ್ಯ ಮತ್ತು ಗುರು, ನಾಲ್ಕರಲ್ಲಿ ಗುರುವಿಗೆ ಮಹತ್ವದ ಸ್ಥಾನ. ಆದ್ದರಿಂದ ಶಿಕ್ಷಕರು ಅಂದರೆ ಸಂಬಳಕ್ಕಾಗಿ ಕಲಿಸುವ ಶಿಕ್ಷಕರಾಗದೇ, ಅಂಧಕಾರವನ್ನು ಕಳೆಯುವ ಗುರುವಾಗಬೇಕೆಂದು ಹೇಳುವುದರೊಂದಿಗೆ ‘ಸಮಾಜದಲ್ಲಿ ಐದು ತರಹದ ಉದಾತ್ತ ವ್ಯಕ್ತಿಗಳಿದ್ದಾರೆ ಅವರೆಂದರೆ ಸೈನಿಕ, ಆಚಾರ್ಯ, ಶಿಕ್ಷಕ, ವೈದ್ಯ ಮತ್ತು ವಕೀಲ ಎಂಬುವವರು ಈ ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಅತ್ಯುತ್ತಮ ವೃತ್ತಿಯಾಗಿದೆ ಏಕೆಂದರೆ ಈ ಎಲ್ಲ ವೃತ್ತಿ ನೈಪುಣ್ಯತೆ ಬರಬೇಕಾದರೆ ಶಿಕ್ಷಕನ ಅವಶ್ಯಕತೆಯಿದೆ’ ಎಂದು ಹೇಳಿದರಲ್ಲದೇ ‘ಶಿಕ್ಷಕ ಪ್ರತಿ ವಿದ್ಯಾರ್ಥಿಯನ್ನು ತನ್ನ ಸ್ವಂತ ಮಕ್ಕಳಿಗೆ ಕಲಿಸುತ್ತಿದ್ದೇನೆಂಬ ಭರವಸೆಯಿಂದ ಕಲಿಸಬೇಕು ಮತ್ತು ಅವನಲ್ಲಿ ಆಸಕ್ತಿ ಮೂಡುವಂತೆ ಮಾಡಬೇಕು’ ಎಂದರು.
ಅಧ್ಯಕ್ಷತೆವಹಿಸಿದ್ದ ಜೆ.ಎಸ್.ಎಸ್. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಿ.ಕೃಷ್ಣಮೂರ್ತಿಯವರು ‘ಶಿಕ್ಷಕರು ವೃತ್ತಿ ನೈಪುಣ್ಯತೆಯನ್ನು ಕರಗತ ಮಾಡಿಕೊಂಡು, ಮಾದರಿ ಶಿಕ್ಷಕರಾಗಿ ಸಂಸ್ಥೆಯ ಘನತೆಯನ್ನು ಹೆಚ್ಚಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ನಿರತರಾಗಿರಬೇಕೆಂದರು’.
ಜೆ.ಎಸ್.ಎಸ್. ಮಹಾವಿದ್ಯಾಲಯದ ಅಭಿವೃದ್ಧಿ ಅಧಿಕಾರಿಗಳಾದ ಪ್ರೊ. ಸೂರಜ ಜೈನ ಸ್ವಾಗತಿಸಿದರು. . ಅನಿತಾ ಪುರಾಣಿಕ ಪ್ರಾರ್ಥಿಸಿದರು. ಡಾ. ಜಗದೀಶ ಬರಗಿ ನಿರೂಪಿಸಿದರು. ಡಾ. ವ್ಹಿ.ಎಸ್. ಭೀಮರೆಡ್ಡಿ ವಂದಿಸಿದರು.
ಸಮಾರಂಭದಲ್ಲಿ ಡಾ. (ಶ್ರೀಮತಿ.) ಚಿತ್ರಾ ದೈಜೋಡೆ, ಡಾ. ಜಿನದತ್ತ ಹಡಗಲಿ, ಡಾ. ವೆಂಕಟೇಶ ಮುತಾಲಿಕ,  ಡಾ. ಕೆ.ಎಚ್. ನಾಗಚಂದ್ರ, ಡಾ. ಶ್ರೀಕಾಂತ ಕುಲಕರ್ಣಿ, ಪ್ರೊ. ವಿವೇಕ ಲಕ್ಷ್ಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.

Leave a Comment