ಶಿಕ್ಷಣ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಬೇಕು

ಅಳ್ನಾವರ,ಸೆ 12- ಶಿಕ್ಷಣ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಬೇಕು. ಪದವಿ ಪಡೆದ ಅಕ್ಷರವಂತರು ನಿರುದ್ಯೋಗಿಗಳಾಗಿ ಕಾಲ ಕಳೆಯಬಾರದು. ಉದ್ಯೋಗವಕಾಶಗಳ ಬಗ್ಗೆ ಅವರಿಗೆ ತಿಳುವಳಿಕೆ ನೀಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ಮಾಹಿತಿ ಕೋಶದ ವಿಶೇಷಾಧಿಕಾರಿ ಡಾ. ಎ. ನಾರಾಯಣ ಪ್ರಸಾದ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿ, ಧಾರವಾಡ ಹಾಗೂ ಪೇಸ್ ಅಕಾಡೆಮಿ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ” ಕಾಲೇಜುಗಳಲ್ಲಿ ಪ್ಲೇಸ್‍ಮೆಂಟ್ ಸೆಲ್‍ನ ಪಾತ್ರ” ಹಾಗೂ “ಉನ್ನತ ಶಿಕ್ಷಣದಲ್ಲಿ ನ್ಯಾಕ್ ಮಾನ್ಯತೆ” ಎಂಬ ವಿಷಯದ ಮೇಲೆ ಹತ್ತು ಸರ್ಕಾರಿ ಕಾಲೇಜುಗಳ ಪ್ರಾಧ್ಯಾಪಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಮತ್ತು ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣದ 125ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನ್ಯಾಕ ಅಂಕ ಗಳಿಸುವ ಬಗ್ಗೆ ಕೈಗೊಳ್ಳಬಹುದಾದ ಅಗತ್ಯ ಕ್ರಮಗಳ ಕುರಿತು ಎರಡು ಗಂಟೆಗಳ ಕಾಲ ಸುಧೀರ್ಘವಾಗಿ  ಮಾಹಿತಿ ಒದಗಿಸಿದರು.
ಉದ್ಘಾಟಕರಾದ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕ ಘಟಕದ ಅಧ್ಯಕ್ಷ ಡಾ ಬಿ.ಬಿ. ಮೂಡಬಾಗಿಲ ಮಾತನಾಡಿ, ಸ್ವಾಮಿ ವಿವೇಕಾನಂದರ ಬದುಕು ಯುವಕರಿಗೆ ಸ್ಪೂರ್ತಿದಾಯಕ. ಜೀವನದ ಸಾಧನೆಗೆ ಅಗತ್ಯವಾಗಿ ಬೇಕಾಗಿರುವುದು ಶೃದ್ಧೆ, ಆತ್ಮವಿಶ್ವಾಸ ಮತ್ತು ಧೈರ್ಯ ತುಂಬಲು ಅವು ಸಹಕಾರಿಯಾಗಿವೆ ಎಂದರು.
ಅತಿಥಿ ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕ ಡಾ. ಬಸವರಾಜ ಎನ್. ಅಕ್ಕಿ ನ್ಯಾಕ್ ಕುರಿತು ಮಾತನಾಡಿದರು.
ಧಾರವಾಡದ ಪೇಸ್ ಅಕಾಡೆಮಿಯ ನಿರ್ದೇಶಕರಾದ ಪಾಶ್ರ್ವನಾಥ ಪಾಲಬಾವಿ, ಹಳಿಯಾಳದ ರುಡ್‍ಸೆಟ್ ಸಂಸ್ಥೆಯ ಕೆಂಪಣ್ಣ ಶೇಗುಣಸಿ ಹಾಗೂ ಧಾರವಾಡದ ರುಡ್‍ಸೆಟ್ ಸಂಸ್ಥೆಯ ನಾಗೇಶ ಶಿಂಧೆ ಅವರು ಮಾತನಾಡಿ, ತಮ್ಮ ಸಂಸ್ಥೆಯಿಂದ ಯುವಕ, ಯುವತಿಯರಿಗಾಗಿ ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಸಿ.ಎನ್. ಹೊಂಬಾಳಿ ಮಾತನಾಡಿ, ‘ಇಂತಹ ಉಪಯುಕ್ತ ಕಾರ್ಯಾಗಾರಗಳ ಮೂಲಕ ಅಧ್ಯಾಪಕರ ಚಟುವಟಿಕೆಗಳ ಕುರಿತು ಸ್ಪಷ್ಟತೆಯ ಅರಿವು ಮೂಡಿ ನ್ಯಾಕ್ ಪೀರ್ ಟೀಮ್ ಬಂದಾಗ ಹೆಚ್ಚಿನ ಗ್ರೇಡ್ ಪಡೆಯಲು ಸಹಾಯವಾಗಬಲ್ಲದು’ ಎಂದರು.
ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ನಾಡಗೀತೆ ಪ್ರಸ್ತುತಪಡಿಸಿದರು. ಪಿ.ಬಿ ಚಾರಿ ಸ್ವಾಗತಿಸಿದರು. ಭಾರತಿ ಪೈ ವಂದಿಸಿದರು . ಶ್ರೀಪಾಲ ಕುರಕುರಿ ನಿರೂಪಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.

Leave a Comment