ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು: ಜ್ಞಾನೇಂದ್ರ

ಬೆಂಗಳೂರು ಫೆ 20 -ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಲ್ಲಿ ನಡೆದಿರುವ ಅವ್ಯವಹಾರದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಮಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಶಿಫಾರಸು ಮಾಡಿದೆ ಎಂದು ಸಮಿತಿ ಅಧ್ಯಕ್ಷ ಅರಗ ಜ್ಞಾನೇಂದ್ರ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖಾ ವ್ಯಾಪ್ತಿಯಡಿ ಬರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಲ್ಲಿನ ವ್ಯಾಪಕ ಲೋಪ ಮತ್ತು ಅಕ್ರಮಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಉಮಾಶಂಕರ್, ಸಮಿತಿ ಮುಂದೆ ದ್ವಂದ್ವ ಹೇಳಿಕೆಗಳನ್ನು ನೀಡಿದ್ದಾರೆ. ಈ ಮೂಲಕ ಸದನ ಸಮಿತಿಯನ್ನು ದಾರಿ ತಪ್ಪಿಸುವ ಕೆಲಸ‌ ಮಾಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸ್ಸು ಮಾಡಲಾಗಿದೆ ಎಂದರು.

ಏನಿದು ಅವ್ಯವಹಾರ?:

ಕೇಂದ್ರ ಸರ್ಕಾರ ಅನುದಾನಿತ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ರಾಜ್ಯದಾದ್ಯಂತ 2010ರಿಂದ 2014ರ ವರೆಗೆ 2024 ಕಾಮಗಾರಿಗಳನ್ನು ಕೈಗೊಳ್ಳಲು ಮಂಜೂರಾತಿ ನೀಡಲಾಗಿತ್ತು. ಶಾಲಾ ಕೊಠಡಿ, ಪ್ರಯೋಗ ಶಾಲೆಗಳು, ಗ್ರಂಥಾಲಯ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.

ಯೋಜನೆಯ ಅನುಷ್ಠನಕ್ಕಾಗಿ 2024 ಕಾಮಗಾರಿಗಳಿಗೆ ಒಟ್ಟಾರೆ ಪರಿಷ್ಕೃತ ಗುತ್ತಿಗೆ ಮೊತ್ತ 1634.32 ಕೋಟಿ ರೂ ನಷ್ಟಿತ್ತು. ಆದರೆ ಕಾಮಗಾರಿಗಳ ನಿರ್ಮಾಣಕ್ಕಾಗಿ ಏಕರೂಪ ಟೆಂಡರ್ ಕರೆಯದೆ ವಿವಿಧ ಪ್ಯಾಕೇಜುಗಳಾಗಿ ವಿಂಗಡಿಸಿ ಟೆಂಡರ್ ಕರೆದು ಲೋಪ ಎಸಗಲಾಗಿದೆ. ಅವುಗಳನ್ನು ಹಲವು ಆಂಧ್ರ ಮೂಲದ ಗುತ್ತಿಗೆದಾರರಿಗೆ ಉಪಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರಿಗೆ ಕಾಮಗಾರಿ ಹಣವನ್ನು ಪಾವತಿ ಮಾಡಿಲ್ಲ.

ರಾಜ್ಯ ಯೋಜನಾ ಇಂಜಿನಿಯರ್ ಟಿ.ಕೃಷ್ಣೇಗೌಡ ಹಾಗೂ ವಿಜಯ್ ಅವರು 76 ಪ್ಯಾಕೇಜುಗಳ ಕಾಮಗಾರಿಗಳ ಮೊತ್ತವನ್ನು ಗರಿಷ್ಠ ಪ್ರಮಾಣದಲ್ಲಿ ಏರಿಕೆ ಮಾಡಿ ಅಕ್ರಮ ಎಸಗಿದ್ದಾರೆ‌ ಎಂದು ಸದನ ಸಮಿತಿ ಹೇಳಿದೆ.

ಶಿಕ್ಷಣ ಇಲಾಖೆಯಲ್ಲಿ ಇಂಜಿನಿಯರಿಂಗ್ ವಿಭಾಗ ಇಲ್ಲದಿದ್ದರೂ ಇಷ್ಟು ದೊಡ್ಡ ಮೊತ್ತದ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಬಹುತೇಕ ಕಾಮಗಾರಿಗಳು ಅಪೂರ್ಣವಾಗಿದೆ. ಇದರಿಂದ ಸರ್ಕಾರಕ್ಕೆ ಸುಮಾರು 700 ಕೋಟಿ ರೂ. ನಷ್ಟವಾಗಿದೆ. ಆದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇಲಾಖಾ ಪ್ರಧಾನ‌ ಕಾರ್ಯದರ್ಶಿ ಉಮಾಶಂಕರ್ ಹಾಗೂ ರಾಜ್ಯ ಯೋಜನಾ ನಿರ್ದೇಶಕರಾದ ಎಂ.ಟಿ.ರೇಜು ಕರ್ತವ್ಯಲೋಪ ಎಸಗಿದ್ದಾರೆ ಎಂದು ತಿಳಿಸಿದೆ.

 

Leave a Comment