ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಕುಮಾರ ಅಧಿಕಾರ ಸ್ವೀಕಾರ

ಧಾರವಾಡ,ಜು.11- ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕರಾಗಿ ಹಿರಿಯ ಕೆ.ಇ.ಎಸ್. ಅಧಿಕಾರಿ ನಾಡಿಗ್ ಷಡಕ್ಷರಪ್ಪ ಕುಮಾರ (ಎನ್.ಎಸ್. ಕುಮಾರ) ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು.
1984ರಲ್ಲಿ ಕರ್ನಾಟಕ ಶಿಕ್ಷಣ ಸೇವೆ (ಕೆಇಎಸ್)  ಪರೀಕ್ಷೆಯನ್ನು ತೇರ್ಗಡೆಯಾದ ಇವರು ಶಿವಮೊಗ್ಗ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸವಿಹಳ್ಳಿ ಸರಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾಗಿ ಸರಕಾರಿ ಸೇವೆ ಆರಂಭಿಸಿದರು. ಹೊನ್ನಾಳಿ ತಾಲೂಕು ಸಹಾಯಕ ಶಿಕ್ಷಣಾಧಿಕಾರಿಯಾಗಿ ಸೇವೆಸಲ್ಲಿಸಿ, ಉತ್ತಮ ಸಹಾಯಕ ಶಿಕ್ಷಣಾಧಿಕಾರಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಬಡ್ತಿ ಹೊಂದುವ ಮೂಲಕ ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾಗಿ, ಹೊನ್ನಾಳಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆಗೈದು ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಉಪನಿರ್ದೇಶಕರ ಹುದ್ದೆಗೆ ಬಡತಿ ಹೊಂದಿ ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರಾಗಿ, ಉತ್ತರಕನ್ನಡ ಹಾಗೂ ಶಿವಮೊಗ್ಗ ಡಿಡಿಪಿಐ ಹುದ್ದೆಗಳಲ್ಲಿಯೂ ಸೇವೆಸಲ್ಲಿಸಿದ್ದಾರೆ. ನಿಕಟಪೂರ್ವದಲ್ಲಿ ಇವರು ಚಿತ್ರದುರ್ಗ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆಸಲ್ಲಿಸುತ್ತಿದ್ದರು. ಸಹ ನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಅವರು ನೂತನ ನಿರ್ದೇಶಕರಿಗೆ ಅಧಿಕಾರ ವಹಿಸಿಕೊಟ್ಟರು. ಇವರ ವ್ಯಾಪ್ತಿಗೆ ವಾಯುವ್ಯ ಕರ್ನಾಟಕದ ಬಾಗಲಕೋಟ, ವಿಜಯಪೂರ, ಬೆಳಗಾವಿ, ಉತ್ತರಕನ್ನಡ, ಹಾವೇರಿ, ಧಾರವಾಡ, ಗದಗ, ಮತ್ತು ಚಿಕ್ಕೋಡಿ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳು ಬರುತ್ತವೆ.

Leave a Comment