ಶಿಕ್ಷಣದೊಂದಿಗೆ ಸಂಸ್ಕಾರವೂ ಬೇಕು

ಬಳ್ಳಾರಿ, ಜು.15: ವಿದ್ಯಾಭ್ಯಾಸ ಸಮಯದಲ್ಲಿ ಮಕ್ಕಳು ಅಂಕಗಳಿಸುವ ಶಿಕ್ಷಣವನ್ನಷ್ಟೆ ಕಲಿತರೆ ಸಾಲದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಂಸ್ಕಾರವಂತರಾಗಿಯೂ ಬೆಳೆಯಬೇಕೆಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು.

ಅವರು ನಿನ್ನೆ ನಗರದ ಅಲ್ಲಿಪುರ ಮಹದೇವ ತಾತ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಇಂದಿನ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮರೆಯಾಗುತ್ತಿದೆ. ಅದಕ್ಕೆ ಸಂಸ್ಕಾರವಿಲ್ಲದ ವಿದ್ಯೆ ಎಷ್ಟು ಕಲಿತರೂ ಉಪಯೋಗವಿಲ್ಲ. ಲಕ್ಷಾಂತರ ರೂಪಾಯಿ ಸಂಬಳದ ನೌಕರಿ ಪಡೆದು ತಂದೆ ತಾಯಿ ನೋಡದ ಮಕ್ಕಳಿದ್ದರೇನು ಬಿಟ್ಟರೇನು ಎಂಬಂತಾಗುತ್ತದೆ. ಅದಕ್ಕಾಗಿ ವಿದ್ಯೆ ಜೊತೆ ಸಂಸ್ಕಾರವೂ ಮುಖ್ಯ ಎಂದರು.

ಕಛೇರಿಗಾಗಿ ನಿವೇಶನ ನೀಡುವಂತೆ ಸಂಘದ ಪದಾಧಿಕಾರಿಗಳು ಸಂಸದರಿಗೆ ಮನವಿ ಮಾಡಿದಾಗ ನೀಡುವ ಭರವಸೆಯನ್ನು ಅವರು ನೀಡಿದರು.

ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್.ಪರಮ ಶಿವಯ್ಯ ಕಾರ್ಯಕ್ರಮ ಉದ್ಘಾಟಿಸಿದರು.

200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಬಿ.ನಿರಂಜನ್ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಅಮರೇಶಯ್ಯ, ಪ್ರಧಾನ ಕಾರ್ಯದರ್ಶಿ ಚೆನ್ನಬಸಯ್ಯ, ಕರ್ನಾಟಕ ಜನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್, ಕಲ್ಯಾಣ ಮಠದ ಶ್ರೀಗಳು, ಗುತ್ತಿಗನೂರು ವಿರೂಪಾಕ್ಷಗೌಡ, ಸರ್ಕಾರಿ ನೌಕರರ ಸಂಘದ ಸದಸ್ಯ ಶಂಕರಮೂರ್ತಿ, ಮೊದಲಾದವರು ಇದ್ದರು.

ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಡಾ.ರಾಜಶೇಖರ ಗಾಣಿಗೇರಾ ಗೈರು ಹಾಜರಿ ಎದ್ದು ಕಾಣುತ್ತಿತ್ತು.

Leave a Comment