ಶಿಕ್ಷಣ,ಉದ್ಯೋಗ: ವಿಚಾರ ಸಂಕಿರಣ 20 ರಂದು

=

ಕಲಬುರಗಿ ಜ 18:  371( ಜೆ) ದಡಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಸಿಗಬೇಕಾದ ಸವಲತ್ತುಗಳ ಕುರಿತು ಜನವರಿ 20 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಹಿಂದಿ ಪ್ರಚಾರ ಸಭಾದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷರಾದ ಎಂ ಬಿ ಅಂಬಲಗಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ವಿಚಾರ ಸಂಕಿರಣ ಉದ್ಘಾಟಿಸಿ, ಕಲ್ಯಾಣ ಕರ್ನಾಟಕದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳ ಜ್ವಲಂತ ಸಮಸ್ಯೆ ಕುರಿತು ಮಾತನಾಡುವರು ಎಂದರು.

ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ ಉಪನ್ಯಾಸಕರಿಗೆ ವೇತನ ಅನುದಾನ,ಮತ್ತು ಮೂಲಭೂತ ಸೌಲಭ್ಯ,ಶಿಕ್ಷಕರ ನೇಮಕಾತಿ,ಟಿಇಟಿ,ಸಿಇಟಿ,ಕೆ ಎಸ್ ಇಟಿ,ಮತ್ತು ಎನ್‍ಇಟಿ ಮುಂತಾದ ಪರೀಕ್ಷೆಗಳಿಗೆ ಕೃಪಾಂಕ, ಸರ್ಕಾರಿ ಶಾಲಾ ಉಪನ್ಯಾಸಕರಿಗೆ ಮುಂಬಡ್ತಿಯಲ್ಲಿ ಆಗುತ್ತಿರುವ  ಅನ್ಯಾಯ ತಡೆಗಟ್ಟುವದು.ಉನ್ನತ ಶಿಕ್ಷಣದ ಶೈಕ್ಷಣಿಕ ಸಾಲ ಮನ್ನಾ ಅಥವಾ ಧನ ಸಹಾಯ ಮೊದಲಾದ ವಿಷಯ ಕುರಿತು ಚರ್ಚಿಸಲಾಗುವದು.

ಈ ಸಮಸ್ಯೆಗಳನ್ನು ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವದು. ಫೆ 10 ರೊಳಗೆ ಸರ್ಕಾರ ಮನವಿಗೆ ಸ್ಪಂದಿಸದಿದ್ದರೆ ಫೆ 11 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸಲಾಗುವದು ಎಂದರು.

ಸುದ್ದಿಗೋಷ್ಠಿಯಲ್ಲಿ  ನಿತಿನ್ ಕೊಸಗಿ,ಕೃಷ್ಣಭಟ್ ಜೋಶಿ,ಸೂರ್ಯಕಾಂತ ಜೀವಣಗಿ,ರಾಜಶೇಖರ ಮಾನೆ,ಅಮರನಾಥ ಸಿಂಧನೂರ,ಮಲ್ಲಿಕಾರ್ಜುನ ಮಾನೆ ,ಸೇರಿದಂತೆ ಹಲವರಿದ್ದರು..

Leave a Comment