ಶಿಕ್ಷಕ ಉತ್ತಮ ಪ್ರಜೆ ನಿರ್ಮಾತೃ

ಸಿರಾ, ಸೆ. ೭- ಶಿಕ್ಷಣ ಒಂದು ದೇಶದ ನಾಗರಿಕತೆಯನ್ನು ಪವಿತ್ರಗೊಳಿಸುತ್ತದೆ. ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಸರಿ ಮಾರ್ಗದಲ್ಲಿ ಮುನ್ನಡೆಸಿ ದೇಶಕ್ಕೆ ಉತ್ತಮ ಪ್ರಜೆಯಾಗಿ ರೂಪಿಸುವುದು ಪ್ರತಿಯೊಬ್ಬ ಗುರುವಿನ ಜವಾಬ್ದಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ್ ಹೇಳಿದರು.

ತಾಲ್ಲೂಕಿನ ಆಂಧ್ರ ಗಡಿ ಭಾಗದ ಕುಗ್ರಾಮ ಅಪ್ಪಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರು ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕ ಈ ಸಮಾಜವನ್ನು ಪರಿಣಾಮಕಾರಿಯಾಗಿ ಬದಲಾವಣೆ ಮಾಡುವಂತ ಸಾಮರ್ಥ್ಯ ಹೊಂದಿದ್ದು, ಮಕ್ಕಳಿಗೆ ಗುರುಗಳು ನೀಡುವಂತ ಬೋಧನೆಯಷ್ಟೆ ಮುಖ್ಯವಲ್ಲ. ಜತೆಗೆ ತಂದೆ-ತಾಯಿಯನ್ನು ಗೌರವದಿಂದ ಕಾಣುವಂತ ಸಂಸ್ಕಾರ ಮಕ್ಕಳಲ್ಲಿ ಬೆಳೆಸುವ ಮೂಲಕ ಈ ನಾಡಿನ ಸಂಸ್ಕೃತಿ ಪರಂಪರೆಯನ್ನು ಕಾಪಾಡಬೇಕು ಎಂದರು.

ಸರ್ವಪಲ್ಲಿ ಡಾ. ರಾಧಾಕೃಷ್ಣರವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಹೆಚ್. ಭಾನುಮತಿ, ಸರ್ಕಾರಿ ಶಾಲೆಗಳಲ್ಲಿ ಸೇವೆ ಮಾಡುತ್ತಿರುವ ಶಿಕ್ಷಕರು ಅತ್ಯಂತ ಕ್ರಿಯಾಶೀಲರಾಗಿದ್ದು, ಗ್ರಾಮೀಣ ಪ್ರದೇಶ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಪೋಷಕರಿಂದ ಗುರುವಂದನೆ ಸ್ವೀಕರಿಸುತ್ತಿರುವುದು ಗುರುವಿನ ಸ್ಥಾನದ ಮಹತ್ವ ಸಾರುತ್ತದೆ. ಶಿಕ್ಷಕರ ಪರಿಶ್ರಮ ವಿದ್ಯಾರ್ಥಿಯೆಂಬ ಕಲ್ಲಿಗೆ ಸುಂದರಮೂರ್ತಿ ನೀಡಬಲ್ಲದು. ಗುರುವಿನ ಸ್ಥಾನದಲ್ಲಿ ಮಾಡಿದ ಪ್ರಾಮಾಣಿಕ ಸೇವೆ, ಸರ್ವಪಲ್ಲಿ ಡಾ.ರಾಧಾಕೃಷ್ಣರವರಿಗೆ ರಾಷ್ಟ್ರಪತಿ ಸ್ಥಾನ ಅಲಂಕರಿಸಲು ಸಾಧ್ಯವಾಯಿತು. ಇಂತಹ ಗುರು ಶಿಕ್ಷಕರಿಗೆ ಆದರ್ಶ ಎಂದರು.

ಇದೇ ಸಂದರ್ಭದಲ್ಲಿ ಅಪ್ಪಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಮಾಡುತ್ತಾ ಜನಮನ್ನಣೆ ಗಳಿಸಿದ ಶಿಕ್ಷಕ ಕೆ. ಮುರಳೀಧರ ಹಾಗೂ ಹೆಚ್.ಜಿ. ಮಂಜುನಾಥ್‌ ರವರಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಗುರುವಂದನೆ ಸಲ್ಲಿಸಿದರು. ವಿದ್ಯಾರ್ಥಿ ಸಂತೋಷ್ ಸವಿನೆನಪಿಗಾಗಿ ಪೋಷಕರು ಶಾಲೆಗೆ ಪಠ್ಯ ಸಲಕರಣೆ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಕೆ. ಮುರಳೀಧರ, ಮುಖ್ಯ ಶಿಕ್ಷಕ ಹೆಚ್.ಜಿ. ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನೇಶಯ್ಯ, ಉಪಾಧ್ಯಕ್ಷೆ ಲತಮ್ಮ, ಸಿಆರ್‌ಪಿ ಅಜೀಜ್ ಮತ್ತಿತರರು ಉಪಸ್ಥಿರಿದ್ದರು.

Leave a Comment