ಶಿಕ್ಷಕೇತರರಿಗೆ ಕೋವಿಡ್-19 ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಜೂ.30: ಖಾಸಗಿ ಅನುದಾನ ರಹಿತ ಶಾಲಾ ಕಾಲೇಜು ಶಿಕ್ಷಕ ಉಪನ್ಯಾಸಕರು ಮತ್ತು ಶಿಕ್ಷಕೇತರರಿಗೆ ಕೋವಿಡ್-19 ಪರಿಹಾರಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜು ಬೋಧಕ ಮತ್ತು ಬೋಧಕೇತರರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೋವಿಡ್-19 ಪರಿಸ್ಥಿತಿಯಿಂದ ಖಾಸಗಿ, ಅನುದಾನರಹಿತ ಶಾಲಾ ಕಾಲೇಜು ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಬೀದಿ ಪಾಲಾಗಿದ್ದು, ದುರ್ದೈವ ಸಂಬಂಧ ಕೋವಿಡ್-19 ಪರಿಹಾರ ನೀಡಬೇಕು. ರಾಜ್ಯಮಟ್ಟದಲ್ಲಿ ಆಡಳಿತ ಮಂಡಳಿಗಳ ಸಂಘದ ಪದಾಧಿಕಾರಿಗಳ ಜೊತೆಗೆ ಸರ್ಕಾರ ಮಧ್ಯ ಪ್ರವೇಶಿಸಿ ಸಭೆ ನಡೆಸಿ ಒಂದು ಸೂಕ್ತ ಪರಿಹಾರ ನೀಡುವ ತೀರ್ಮಾನಕ್ಕೆ ಬರಬೇಕು. ಖಾಸಗಿ ಅನುದಾನ ರಹಿತ ಶಿಕ್ಷಕ ಮತ್ತು ಶಿಕ್ಷಕೇತರ ಕುಟುಂಬಗಳಿಗೆ ಕೋವಿಡ್ ವೈರಸ್ ತಗುಲಿದರೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಕಳೆದ ಮಾರ್ಚ್ ನಿಂದ ಮುಂದಿನ ಶೈಕ್ಷಣಿಕ ಶಾಲಾ ವರ್ಷ ಆರಂಭವಾಗುವವರೆಗೆ ಪರಿಹಾರ ನೀಡಬೇಕು. ಈ ಪರಿಹಾರವನ್ನು ಟೀಚರ್ ವೆಲ್ಫೆರ್ ಫಂಡ್ ಮತ್ತು ಸ್ಟೂಡೆಂಟ್ ವೆಲ್ಫೆರ್ ಫಂಡ್ ಕಲ್ಯಾಣ ನಿಧಿಯನ್ನು ಬಳಸಿಕೊಳ್ಳುವುದರ ಮೂಲಕ ಪರಿಹಾರ ನೀಡಬೇಕು. ಆರ್ ಟಿಐ ಯೋಜನೆಗೆ ಒಳಪಡದ ಖಾಸಗಿ ಶಾಲಾ ಕಾಲೇಜು ಮತ್ತು ಪದವಿ ಕಾಲೇಜುಗಳ ಶಿಕ್ಷಕ ಮತ್ತು ಉಪನ್ಯಾಸಕರಿಗೂ ಕೂಡ ಪರಿಹಾರ ಘೋಷಣೆ ಮಾಡಬೇಕು. ಕೋವಿಡ್-19 ರ ಪ್ರಭಾವ ಖಾಸಗಿ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷದ ದಾಖಲಾತಿಗಳ ಪ್ರಭಾವ ಬೀರುವ ಹಿನ್ನೆಯಲ್ಲಿ ವಿವಿಗಳು ಕಾಲೇಜುಗಳ ಸಂಯೋಜಿತ ಶುಲ್ಕವನ್ನು ಮನ್ನಾ ಮಾಡಬೇಕೆಂದು ವಿವಿಗಳಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ರಾಜಶೇಖರ್ ಮೂರ್ತಿ, ಉಪಾಧ್ಯಕ್ಷ ಡಾ.ಅಂತೋಣಿ ಪಾಲ್ ರಾಜ್ ಮತ್ತಿತರರು ಪಾಲ್ಗೊಂಡಿದ್ದರು.

Share

Leave a Comment