ಶಿಕ್ಷಕರ ಕೊರತೆ: ಶಾಲೆಗೆ ಬೀಗ ಜಡಿದು ಗ್ರಾಮಸ್ಥರಿಂದ ಪ್ರತಿಭಟನೆ

ಮುಂಡಗೋಡ,ಸೆ9-  ತಾಲೂಕಿನ ಉಗ್ಗಿನಕೇರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು ಇದರಿಂದ ಶಿಕ್ಷಣ ಗುಣಮಟ್ಟದಲ್ಲಿ ತೊಂದರೆಯಾಗಿದೆ. ಶೀಘ್ರವೇ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಎಸ್.ಡಿ.ಎಮ್.ಸಿ. ಅಧ್ಯಕ್ಷ, ಸದಸ್ಯರು ಮತ್ತು ಗ್ರಾಮಸ್ಥರು ಸೇರಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ತಾಲೂಕಿನ ಉಗ್ಗಿನಕೇರಿಯ ಸ.ಹಿ.ಪ್ರಾ.ಶಾಲೆಯಲ್ಲಿ ಒಟ್ಟು 8ಹುದ್ದೆಗಳಿದ್ದು ಒಬ್ಬ ಶಿಕ್ಷಕ ಬಡ್ತಿ ಹೊಂದಿ, ಮತ್ತೊಬ್ಬರು ನಿಯೋಜಿತರಾಗಿ ಬೇರೆ ಕಡೆ ಹೋಗಿದ್ದು ಪ್ರಸಕ್ತ ಸಾಲಿನಲ್ಲಿ 6ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು 3ಶಿಕ್ಷಕರು ಖಾಯಂ ಮತ್ತು 3ಶಿಕ್ಷಕರು ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಗಣಿತ ಮತ್ತು ವಿಜ್ಞಾನ ವಿಷಯಗಳ ಬೋಧಕರು ಇಲ್ಲದೇ ಮಕ್ಕಳಿಗೆ ತೊಂದರೆಯಾಗುತ್ತಿದೆ. ಖಾಲಿ ಇದ್ದ ಶಿಕ್ಷಕರನ್ನು ನೇಮಿಸುವಂತೆ ಈ ಹಿಂದೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರೂ ಶಿಕ್ಷಕರನ್ನು ನಿಯೋಜಿಸಿಲ್ಲ ಮತ್ತು ಶಾಲೆಗೆ ಬೀಗ ಜಡಿಯುವುದಾಗಿ ಈ ಹಿಂದೆಯೂ ಎಚ್ಚರಿಕೆ ನೀಡಲಾಗಿತ್ತು ಎಂದು ಆರೋಪಿಸಿದ ಗ್ರಾಮಸ್ಥರು ಅದರಂತೆ ಶುಕ್ರವಾರ ಇಲ್ಲಿನ ಶಾಲೆಯ ಎಲ್ಲಾ ಕೊಠಡಿಗಳಿಗೆ ಗ್ರಾಮಸ್ಥರು ಬೀಗ ಜಡಿದು ಪ್ರತಿಭಟಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಇಲ್ಲಿನ ಬಿಇಒ ಡಿ.ಎಮ್.ಬಸವರಾಜಪ್ಪ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಪಟ್ಟರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಈ ಕೂಡಲೇ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿದರು. ನಂತರ ಬಿಇಒ ಒಂದು ವಾರದೊಳಗಾಗಿ ಶಿಕ್ಷಕರ ನಿಯೋಜನೆ ಮಾಡುವುದಾಗಿ ಲಿಖಿತ ಹೇಳಿಕೆಯನ್ನು ನೀಡಿದಾಗ ಪ್ರತಿಭಟನೆಯನ್ನು ನಿಲ್ಲಿಸಿದರು.
ಎಸ್.ಡಿ.ಎಮ್.ಸಿ. ಅಧ್ಯಕ್ಷ ಬಸವರಾಜ ಜಾಧವ ಈ ಕುರಿತು ಮಾಧ್ಯಮದ ಜೊತೆ ಮಾತನಾಡಿ,:- ಕಳೆದ ಸಾಲಿನಲ್ಲಿ ಶಾಲೆಯ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 249ಇತ್ತು. ಶಿಕ್ಷಕರ ಕೊರತೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 199ಕ್ಕೆ ಇಳಿದಿದ್ದು ಒಂದೇ ವರ್ಷದಲ್ಲಿ 50ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಅಧಿಕಾರಿಗಳೇ ನೇರವಾದ ಕಾರಣ. ಬಿಇಒರವರು ನೀಡಿದ ಲಿಖಿತ ಹೇಳಿಕೆಯ ಪ್ರಕಾರ 7ದಿನದೊಳಗಾಗಿ ಶಿಕ್ಷಕರನ್ನು ನೇಮಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ದೀಪಾ ಜಾಧವ, ಸದಸ್ಯರುಗಳಾದ ಚನ್ನಬಸಯ್ಯಾ ಹಿರೇಮಠ, ರೇಣುಕಾ ಮೇಟಿ, ಗೀತಾ ಹಿರೇಮಠ, ಮಾಬುಬಿ ಲಕ್ಷ್ಮೇಶ್ವರ, ಎಲ್ಲ ಸದಸ್ಯರು ಹಾಗೂ ಗ್ರಾ.ಪಂ.ಅಧ್ಯಕ್ಷ ಬಸಯ್ಯಾ ನಡುವಿನಮನಿ, ಗ್ರಾಮಸ್ಥರಾದ ಮಂಜುನಾಥ ಹಿರೇಮಠ, ಗುರುಪಾದಯ್ಯಾ ಹಿರೇಮಠ, ವಿಠಲ ಗಾಂವಕರ, ಬೀಬಿಜಾನ ಅತ್ತಾರ ಮೌಲಾಲಿ ನದಾಫ, ಕಲ್ಲಪ್ಪ ಬಡಿಗೇರ, ಬಸಯ್ಯಾ ಹಿರೇಮಠ, ಈರಪ್ಪ ಹೆಬ್ಬಳ್ಳಿ, ಮತ್ತಿತರಿದ್ದರು.

Leave a Comment