ಶಿಕ್ಷಕರು ಜ್ಞಾನ ದಾಸೋಹಿಗಳಾಗಲು ಕರೆ

ಮಧುಗಿರಿ,ಸೆ. ೭- ಶಿಕ್ಷಕರು ಎಲ್ಲ ವೃತ್ತಿಗಳ ನಿರ್ಮಾತೃಗಳು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಶಿಕ್ಷಣದ ಜತೆಗೆ ಮಕ್ಕಳಲ್ಲಿ ಸತ್ಯಸಂಧತೆ, ತಾಳ್ಮೆ, ವಿನಯ, ಪ್ರಾಮಾಣಿಕತೆ ನಿಷ್ಠೆ ಮತ್ತಿತರ ಗುಣಗಳನ್ನು ಮೈಗೂಡಿಸುವ ಅತ್ಯುತ್ತಮ ಸಾಮರ್ಥ್ಯ ಶಿಕ್ಷಕರಲ್ಲಿದೆ. ಶಿಕ್ಷಕರು ತಮ್ಮಲ್ಲಿರುವ ಅಪೂರ್ವ ಜ್ಞಾನ ಭಂಡಾರವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುವ ಮೂಲಕ ಜ್ಞಾನದಾಸೋಹಿಗಳಾಗಬೇಕು ಎಂದು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನರಸಿಂಹಮೂರ್ತಿ ಟಿ.ಎನ್. ಕರೆ ನೀಡಿದರು.

ತಾಲ್ಲೂಕಿನ ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ವಪಲ್ಲಿ ರಾಧಾಕೃಷ್ಣನ್ ರವರು ಶಿಕ್ಷಕ ವೃತ್ತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಶಿಕ್ಷಕ ವೃತ್ತಿಯ ಘನತೆಯಿಂದ ರಾಷ್ಟ್ರಪತಿ ಹುದ್ದೆ ಒಲಿಸಿಕೊಂಡ ಅಪ್ರತಿಮ ಸಾಧಕರಾಗಿದ್ದಾರೆ. ಅವರ ಜನ್ಮದಿನವನ್ನು ಎಲ್ಲ ಶಿಕ್ಷಕರಿಗೆ ಅರ್ಪಿಸಿದ ತ್ಯಾಗಮಯಿಯಾಗಿದ್ದಾರೆ. ಪುರಾತನ ಕಾಲದಲ್ಲಿ ಶಿಕ್ಷಕರಿಗೆ ಪೂಜ್ಯನೀಯ ಸ್ಥಾನಮಾನವಿತ್ತು. ಗುರುಗಳು ಹೇಳಿದ ಮಾತನ್ನು ಕಾಯಾ ವಾಚಾ ಮನಸಾ ಪಾಲಿಸುವ ಮೂಲಕ ಸದೃಢ ವ್ಯಕ್ತಿತ್ವ ನಿರ್ಮಾಣವಾಗುತ್ತಿತ್ತು. ಶಿಕ್ಷಕರಲ್ಲಿ ಅಪಾರ ಗೌರವ ಇರಿಸಿಕೊಂಡ ಏಕಲವ್ಯ, ಅಂಬೇಡ್ಕರ್, ಅಬ್ದುಲ್ ಕಲಾಂ, ಕುವೆಂಪು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದರು.

ಶಿಕ್ಷಕರು ಸಮಾಜ ತಿದ್ದುವ ಕೆಲಸವನ್ನು ಮಾಡಬಲ್ಲ ಶಕ್ತಿಯುಳ್ಳವರು. ಸಾಮಾಜಿಕ ಪಿಡುಗುಗಳ ಮೂಲೋತ್ಪಾಟನೆಗೆ ಶ್ರಮಿಸುವ ಶಿಕ್ಷಕರ ಕಾರ್ಯ ಅಭಿನಂದನೀಯ. ಶಿಕ್ಷಕರಿಗೆ ಸಮಾಜದಲ್ಲಿ ಅತ್ಯುನ್ನತವಾದ ಗೌರವ ಅವರಲ್ಲಿರುವ ಜ್ಞಾನದಿಂದ ಲಭಿಸುತ್ತದೆ. ಆದ್ದರಿಂದ ಶಿಕ್ಷಕರಾದವರು ನಿರಂತರ ಕಲಿಕಾರ್ಥಿಯಾಗಿ, ಕಲಿತ ಜ್ಞಾನವನ್ನು ವರ್ಗಾಯಿಸಬೇಕು. ವಿದ್ಯಾರ್ಥಿಗಳು ಶಿಕ್ಷಕರನ್ನು ಅನುಕರಿಸುತ್ತಾರೆ. ಆದ್ದರಿಂದ ಶಿಕ್ಷಕ ಅತ್ಯಂತ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಸಕಾರಾತ್ಮಕ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಿ, ಅವರನ್ನು ಪ್ರತಿಭಾವಂತರನ್ನಾಗಿ ಮಾಡುವ ಹೊಣೆ ಶಿಕ್ಷಕರ ಮೇಲಿದೆ ಎಂದರು.

ಮಾನವನ ಜೀವನ ಅಮೂಲ್ಯವಾದುದು. ತಂದೆ-ತಾಯಿಗಳ ಆಸರೆಯಲ್ಲಿ ಬೆಳೆದ ಮಕ್ಕಳು, ಅತಿ ಹೆಚ್ಚು ಬೆಳೆಯುವುದು ಶಾಲೆಯಲ್ಲಿ ಆದ್ದರಿಂದ ಸದೃಢ ಮಾನವ ಸಂಪನ್ಮೂಲ ನಿರ್ಮಿಸುವ ಸವಾಲು ಶಿಕ್ಷಕರ ಮುಂದಿದೆ. ಆದ್ದರಿಂದ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿ ಅವರ ಏಳ್ಗೆಗೆ ಕಾರಣಕರ್ತರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮುನಿರಾಜು, ಸತೀಶ್‌ಕುಮಾರ್, ನಟರಾಜು, ಲಕ್ಷ್ಮಿನಾರಾಯಣ್, ಮಹಮದ್ ರಹಮತುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

ಭಾಗ್ಯಲಕ್ಷ್ಮಿ ಸ್ವಾಗತಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ವಂದಿಸಿದರು.

Leave a Comment