ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ನೆರವು : ರವಿ

ಮೈಸೂರು, ಫೆ.15- ಕಳೆದ ಏಳೆಂಟು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಿದ್ದು ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ಅನುದಾನ ಬರುವ ನಿರೀಕ್ಷೆಯಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಇಂದಿಲ್ಲಿ ಹೇಳಿದ್ದಾರೆ.
ಸ್ಥಳೀಯ ನಾಯಕರು ಆಗಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಆಸಕ್ತಿ ತೋರಿಸಿರಲಿಲ್ಲ. ಹೀಗಾಗಿ ಯೋಜನೆಗೆ ಚಾಲನೆ ಸಿಕ್ಕಿರಲಿಲ್ಲ ಎಂದು ಅವರು ಆರೋಪಿಸಿದರು.
ಮೈಸೂರು ವಿಶ್ವವಿದ್ಯಾನಿಲದ ಮಾನಸಗಂಗೋತ್ರಿಯಲ್ಲಿ ಕೇಂದ್ರೀಯ ಭಾಷಾ ಸಂಸ್ಥಾನದ ನಿರ್ದೇಶಕರಿಗೆ ಗುತ್ತಿಗೆ ಆಧಾರದ ಮೇಲೆ ನೀಡಿದ್ದು, ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತೀಯ ಭಾಷಾ ಅಧ್ಯಯನ ಸಂಸ್ಥೆಯನ್ನು ಮೈಸೂರಿನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದು ಇದರಿಂದಾಗಿ ಕನ್ನಡ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕೆ ಹೆಚ್ಚು ಒತ್ತು ಸಿಗಲಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ ದಾಪುಗಾಲನ್ನಿಟ್ಟಿದೆ. ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳನ್ನು ಈ ರೀತಿ ಮುಂಚೂಣಿಗೆ ತಂದು ಸಮಸ್ಯೆಗೆ ಪರಿಹಾರ ಹುಡುಕಿ ಸದ್ಯದಲ್ಲೇ ಆರಂಭವಾಗುವ ಹಾಗೆ ಮಾಡಬೇಕೆಂಬ ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿದೆ ಎಂದರು
ಮಾತೃ ಸಂಸ್ಥೆಯ ಜೊತೆಯಲ್ಲಿ ಎಂಹೆಚ್ ಆರ್ ಡಿಯ ಸಹಾಯದೊಂದಿಗೆ ಕನ್ನಡ ಭಾಷೆ ಶಾಶ್ವತವಾಗಿ ಉಳಿಯುವ ಒಂದು ಕೆಲಸವನ್ನು ಇಲ್ಲಿ ಹಮ್ಮಿಕೊಂಡಿದೆ. ಶಾಸ್ತ್ರೀಯ ಸ್ಥಾನಮಾನ ಅದು ಕೇವಲ ಬೋರ್ಡ್ ಅಲ್ಲ. ಅದರ ಹಿಂದೆ ಇರುವ ಮನೋಧರ್ಮ ಬಹಳ ಮುಖ್ಯ. ಸಾಹಿತ್ಯ, ಸಂಸ್ಕೃತಿ ಇವೆಲ್ಲಕ್ಕು ಹೆಚ್ಚಿನ ಒತ್ತು ಕೊಡುವ ಮೈಸೂರಿನಲ್ಲಿ ಆಗುತ್ತಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಅಗಿದೆ. ಅದರ ಮೂಲಕ ಇಡೀ ಸಾಹಿತ್ಯಿಕ, ಸಾಂಸ್ಕೃತಿಕ ಜಗತ್ತೊಂದನ್ನು ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನದ ಜೊತೆ ಜೊತೆಯಲ್ಲಿ ಕೊಂಡೊಯ್ಯುವ ಬದ್ಧತೆ ಈ ಸಂಸ್ಥೆ ಮಾಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ , ಕುಲಸಚಿವ ಪ್ರೊ.ಆರ್.ಶಿವಪ್ಪ ಮತ್ತಿತರರು ಸ್ಥಳದಲ್ಲಿದ್ದರು.

Leave a Comment