ಶಾಸಕ ಸ್ಥಾನಕ್ಕೆ ರಾಜೀನಾಮೆ, ವಿಶ್ವ ಚಿಂತನೆ

ಬೆಂಗಳೂರು, ಜೂ. ೨೦- ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವ ಹೆಚ್.ವಿಶ್ವನಾಥ್ ರವರು, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅಸಮಾದಾನ ಹೊರ ಹಾಕಿದ್ದಾರೆ.
ಒಂದು ವೇಳೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸದಿದ್ದರೆ ದೇವೇಗೌಡರ ಆಶೀರ್ವಾದದಿಂದ ಸಿಕ್ಕಿರುವ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದೇನೆ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ಇಂದು ತಿಳಿಸಿದರು.
ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದು ಒಳ್ಳೆಯದು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ದೇವರಾಜಅರಸು, ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ಹುದ್ದೆ ಎರಡನ್ನೂ ನಿಭಾಯಿಸಿದ ಉದಾಹರಣೆಗಳು ನಮ್ಮ ಮುಂದಿವೆ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನ್ನ ಅನುಭವವನ್ನು ಉಪಯೋಗಿಸಿಕೊಳ್ಳಲಿಲ್ಲ ಎಂದು ನೋವು ತೊಡಿಕೊಂಡ ಅವರು, ಈ ಹಿಂದೆ ಸಿದ್ಧರಾಮಯ್ಯ ಸಹ ನನ್ನ ಅನುಭವ ಉಪಯೋಗಿಸಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಮುಖ್ಯಮಂತ್ರಿಗಳ ಜತೆ ಹೆಗಲಾಗಿ ನಿಲ್ಲಬೇಕು ಎಂದುಕೊಂಡಿದ್ದೆ ಆದರೆ ಅದು ಆಗಲಿಲ್ಲ ಎಂದು ಅವರು ನೋವಿನಿಂದ ಹೇಳಿದರು.
ದೇವೇಗೌಡರನ್ನು ಎರಡು ದಿನಗಳ ಹಿಂದೆ ಭೇಟಿಯಾಗಿ ರಾಜೀನಾಮೆ ಅಂಗೀಕಾರಕ್ಕೆ ಮನವಿ ಮಾಡಿದ್ದೆ. ಆದರೆ ಅವರು ನೀವೇ ಮುಂದುವರೆಯಿರಿ ಎಂದು ಹೇಳಿದ್ದರು. ಮತ್ತೆ ಅವರನ್ನು ಭೇಟಿ ಮಾಡಿ ಮುಖಾಮುಖಿ ಎದುರಿಸುವ ಚೈತನ್ಯ ನನಗಿಲ್ಲ. ಹಾಗಾಗಿ ಮಾಧ್ಯಮಗಳ ಮೂಲಕ ಮತ್ತೆ ಮನವಿ ಮಾಡುತ್ತಿದ್ದೇನೆ ದಯವಾಡಿ ರಾಜೀನಾಮೆ ಅಂಗೀಕರಿಸಿ ಎಂದು ವಿಶ್ವನಾಥ್ ಕೈ ಮುಗಿದು ಹೇಳಿದರು.
@12bc = ತಿರಸ್ಕಾರ
ಈ ಸರ್ಕಾರದಲ್ಲಿ ಶಿಕ್ಷಣ ಇಲಾಖೆ ಅನಾಧಾರಣೆಗೆ ಒಳಗಾಗಿದೆ. ಸಮರ್ಥ ನಾಯಕತ್ವದ ಕೊರತೆ ಶಿಕ್ಷಣ ಇಲಾಖೆಯನ್ನು ಕಾಡುತ್ತಿದೆ. ಅಧಿಕಾರಿಗಳ ದರ್ಬಾರ್ ಹೆಚ್ಚಾಗಿದೆ. ಇದು ಸರಿಯಲ್ಲ. ಕೂಡಲೇ ಶಿಕ್ಷಣ ಇಲಾಖೆಗೆ ಒಬ್ಬ ಸಚಿವರನ್ನು ನೇಮಕ ಮಾಡಿ ಎಂದು ಹೆಚ್. ವಿಶ್ವನಾಥ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು.
ಶಿಕ್ಷಣ ಇಲಾಖೆ ಪ್ರತಿ ಮನೆಯಲ್ಲೂ ಇದೆ. ರಾಜ್ಯದ ಸುಮಾರು ಒಂದೂವರೆ ಕೋಟಿ ಮಕ್ಕಳು ಶಾಲೆಗಳಲ್ಲಿ ಓದುತ್ತಿದ್ದಾರೆ. ಮೂರುವರೆ ಲಕ್ಷ ಉದ್ಯೋಗಿಗಳು ಶಿಕ್ಷಣ ಇಲಾಖೆಯಲ್ಲಿ ಇದ್ದಾರೆ. ಇಂತಹ ಇಲಾಖೆಯನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಶಿಕ್ಷಣ ಇಲಾಖೆಯನ್ನು ನಿರ್ಲಕ್ಷಿಸಿದ ಯಾವುದೇ ಸರ್ಕಾರಗಳನ್ನು ಜನ ಚುನಾವಣೆಯಲ್ಲಿ ಪುರಸ್ಕರಿಸುವುದಿಲ್ಲ ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಉನ್ನತ ಶಿಕ್ಷಣ ಸಚಿವರಾಗಿರುವ ಜಿ.ಟಿ. ದೇವೇಗಡೌರು ನಾನು ಆರನೇ ತರಗತಿ ಓದಿದ್ದೇನೆ. ನನಗೆ ಉನ್ನತ ಶಿಕ್ಷಣ ಇಲಾಖೆ ಬೇಡ ಎಂದರೂ ಅದನ್ನು ಅವರ ತಲೆಗೆ ಕಟ್ಟಲಾಯಿತು ಎಂದರು.
ಕಾಂಗ್ರೆಸ್‌ನಲ್ಲಿ ರೋಷನ್ ಬೇಗ್ ರವರನ್ನು ಸಸ್ಪೆಂಡ್ ಮಾಡಿರುವುದು ನೋವು ತಂದಿದೆ. ಸಿದ್ಧರಾಮಯ್ಯ ಹಿಂದೆ ನನಗೂ ಇಂತಹದ್ದೆ ಪರಿಸ್ಥಿತಿ ಸೃಷ್ಟಿ ಮಾಡಿದ್ದರು. ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡದಿದ್ದರೆ ನನಗೂ ಅಮಾನತ್ತಿನ ಬರೆ ಹಾಕುತ್ತಿದ್ದರು. ಅಹಿಂದ ಮುಖಂಡರು ಎಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ಅಲ್ಪಸಂಖ್ಯಾತರ ಮುಂಖಡರನ್ನೇ ತಮ್ಮ ದ್ವೇಷಕ್ಕಾಗಿ ತುಳಿಯಲು ಹೊರಟಿರುವುದು ಸರಿಯಲ್ಲ. ಈ ರೀತಿ ರಾಜಕಾರಣ ಒಳ್ಳೆಯದಲ್ಲ ಎಂದು ಹೇಳಿದರು.
ಖಾತೆ ಹಂಚಿಕೆ ಅಸಮಾಧಾನ
ನೂತ ಸಚಿವರುಗಳಾಗಿರುವ ಪಕ್ಷೇತರ ಶಾಸಕರುಗಳಾದ ಆರ್. ಶಂಕರ್ ಮತ್ತು ನಾಗೇಶ್ ಇವರುಗಳಿಗೆ ಇನ್ನು ಖಾತೆ ಹಂಚಿಕೆಯಾಗಿಲ್ಲ ಇದು ಅವರಿಗೆ ಮಾಡುವ ಅಪಮಾನ ಕೂಡಲೇ ಖಾತೆ ಹಂಚಿಕೆ ಮಾಡಿ ಎಂದು ಅವರು ಒತ್ತಾಯಿಸಿದರು.
ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ಧರಾಮಯ್ಯನವರಿಗೂ ನೂತನ ಸಚಿವರಿಗೆ ಖಾತೆ ಕೊಡಿಸಲು ಆಗಿಲಿಲ್ಲ ಎಂದ ಮೇಲೆ ಅವರು ಯಾವ ಸೀಮೆಯ ಅಧ್ಯಕ್ಷ ಎಂದು ಟೀಕಿಸಿದ ವಿಶ್ವನಾಥ್, ಮುಖ್ಯಮಂತ್ರಿಗಳು ಸಹ ಯಾಕೆ ಹೀಗೆ ಮಾಡುತ್ತಿದ್ದಾರೋ, ಯಾರು ಅವರನ್ನು ತಡೆದಿದ್ದಾರೋ ನನಗಂತೂ ಗೊತ್ತಿಲ್ಲ ಎಂದರು.

Leave a Comment